ಜಿಲ್ಲೆ

ಯಕ್ಷಗಾನದಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚುತ್ತಿರುವುದು ಪ್ರಶಂಶನೀಯ: ಸ್ಪೀಕರ್​ ಯು.ಟಿ.ಖಾದರ್​

ಬೆಂಗಳೂರು: ಯಕ್ಷಗಾನ ಕರಾವಳಿ ಭಾಗದ ಕಣ್ಣಿದ್ದಂತೆ. ಈ ಕಲೆಯಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್​ ಹೇಳಿದ್ದಾರೆ.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಜರುಗಿದ ಕರ್ನಾಟಕ ಮಹಿಳಾ ಯಕ್ಷಗಾನ ತಂಡದ ಬೆಳ್ಳಿ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಭಾನುವಾರ ಮಾತನಾಡಿ, ಕಳೆದ 25 ವರ್ಷಗಳಿಂದ ಕರ್ನಾಟಕ ಮಹಿಳಾ ಯಕ್ಷಗಾನ ತಂಡ ಯಕ್ಷಗಾನ ಕಲೆಯನ್ನು ದೇಶದೆಲ್ಲೆಡೆ ಪಸರಿಸುತ್ತಿರುವುದು ಅಭಿನಂದನೀಯ ಎಂದು ಪ್ರಶಂಶಿಸಿದರು.

ಮಂಗಳೂರು ಮೀಡಿಯಾ ಅಲೂಮ್ನಿ ಅಸೋಸಿಯೇಷನ್​ ವತಿಯಿಂದ ಯಕ್ಷಗಾನ-ಮಹಿಳೆ-ಮಾಧ್ಯಮ ಎಂಬ ವಿಷಯದಲ್ಲಿ ಚಿಂತನ-ಮಂಥನ ಕಾರ್ಯಕ್ರಮ ನಡೆಯಿತು. ಬಳಿಕ ಕೋಟ ಶಿವರಾಮ ಕಾರಂತರು ನಿರ್ದೇಶಿಸಿದ್ದ ಯಕ್ಷಗಾನ ಬ್ಯಾಲೆ ಪ್ರದರ್ಶನ ಎಲ್ಲರ ಮನಸೂರೆಗೊಳಿಸಿತು. ಸಂಸ್ಥೆಯ ಮಕ್ಕಳಿಂದ ಆಂಗ್ಲಭಾಷೆಯಲ್ಲಿ ಕಂಸವಧೆ ಎನ್ನುವ ಯಕ್ಷಗಾನ ಪ್ರದರ್ಶನಗೊಂಡಿತು.

ಈ ಸಂದರ್ಭದಲ್ಲಿ 14 ಯಕ್ಷಗಾನ ಗುರುಗಳಿಗೆ "ಕರ್ನಾಟಕ ಯ ಗುರು ಪ್ರಶಸ್ತಿ' ನೀಡಿ ಗೌರವಿಸಲಾಯಿತು. ದೂರದರ್ಶನ, ಆಕಾಶವಾಣಿಯ ನಿರ್ದೇಶಕ ನಿರ್ಮಲ ಎಲಿಗಾರ್​, ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ಡಾ. ತೇಜಸ್ವಿನಿ ಅನಂತ್​ ಕುಮಾರ್​, ಹಿರಿಯ ಪತ್ರಕರ್ತ ಡಾ. ಈಶ್ವರ್​ ದೈತೋಟ, ವಿಕಾಸ್​ ಗ್ಲೋಬಲ್​ ಸೋಲ್ಯುಷನ್ಸ್​ನ ಅಧ್ಯರಾದ ಡಿ.ವಿ ವೆಂಕಟಾಚಲಪತಿ, ಜಿ. ಶೀನಿವಾಸ್​ ರಾವ್​, ಸಂಸ್ಥೆಯ ಸ್ಥಾಪಕಿ ಕೆ. ಗೌರಿ ಮತ್ತಿತರರಿದ್ದರು.