ತಾವರಗೇರಾ ಹೊರವಲಯದಲ್ಲಿ ಬಿತ್ತಿದ್ದ ತೊಗರಿ ಬೆಳೆ ಮಳೆ ಇಲ್ಲದೇ ಒಣಗಿವೆ. 
ಜಿಲ್ಲೆ

ಬಿತ್ತಿದ್ದ ಬೆಳೆ ಹರಗಲು ಮುಂದಾದ ರೈತರು

ರುದ್ರಪ್ಪ ವಾಲಿ

ತಾವರಗೇರಾ: ಸುತ್ತಲಿನ ಹೋಬಳಿ ವ್ಯಾಪ್ತಿಯಲ್ಲಿ ತಿಂಗಳಿಂದ ಮಳೆ ಬಾರದ ಕಾರಣ ಬಿತ್ತನೆ ಮಾಡಿದ್ದ ಬೆಳೆಗಳು ಒಣಗುತ್ತಿದ್ದು, ಹಲವಾರು ರೈತರು ಬೆಳೆಯನ್ನು ಹರಗುತ್ತಿದ್ದಾರೆ.

ಸಜ್ಜೆ, ಹೆಸರು, ನವಣೆ, ಎಳ್ಳು, ತೊಗರಿ ಸೇರಿ ಇನ್ನಿತರ ಬೆಳೆಗಳು ಮಳೆಯ ಅಭಾವದಿಂದ ಬಾಡಲಾರಂಭಿಸಿವೆ. ಮುಂಗಾರು ಮಳೆಯ ಅಭಾವದಿಂದ ಈ ವರ್ಷ ಇನ್ನೂ ಕೆಲವು ಜನರು ಬಿತ್ತನೆ ಮಾಡಿಲ್ಲ. ಈ ವಾರದಲ್ಲಿ ಮಳೆಯಾಗದಿದ್ದರೆ ಬೆಳೆಗಳು ಚಿಗುರೊಡೆಯುವುದಿಲ್ಲ.

ಬಿತ್ತನೆ ಪ್ರಮಾಣ ಕಡಿಮೆ

ಬಿತ್ತನೆ ಸಮಯದಲ್ಲಿ ಸಕಾಲಕ್ಕೆ ಮಳೆಯಾಗದಿದ್ದರಿಂದ ಬಿತ್ತನೆ ಪ್ರಮಾಣವೂ ಕಡಿಮೆಯಾಗಿದೆ. ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಸಲ ಬೆಳೆಯುತ್ತಿದ್ದ ಒಟ್ಟು ಪ್ರದೇಶದಲ್ಲಿ ಅರ್ಧದಷ್ಟು ಬಿತ್ತನೆ ಆಗಿಲ್ಲ. ಮಳೆ ಇದೇ ರೀತಿ ಕೈಕೊಟ್ಟರೆ ತೊಗರಿ, ಸಜ್ಜೆ, ಹೆಸರು ಸೇರಿ ಇನ್ನಿತರ ಬೆಳೆಗಳ ಇಳುವರಿ ಕುಂಠಿತಗೊಳ್ಳಲಿದೆ.

ಜಾನುವಾರುಗಳು ಸೇರಿ ಆಡು, ಕುರಿಗಳಿಗೆ, ಬೇಸಿಗೆ ಸಮಯದಲ್ಲಿ ಹೊಟ್ಟು-ಮೇವಿನ ಕೊರತೆಯೂ ಆಗಲಿದೆ. ಕೆಲ ರೈತರು ತಮ್ಮ ಜಾನುವಾರುಗಳಿಗೆ ಮೇವಿನ ಕೊರತೆ ಕಂಡುಬಂದಿರುವುದರಿಂದ, ಕುಷ್ಟಗಿ, ಸಿಂಧನೂರು, ಕೂಕನಪಳ್ಳಿ ದನಗಳ ಸಂತೆಗಳಲ್ಲಿ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಿರುವುದಾಗಿ ರೈತ ಶಿವಪ್ಪ ತಿಳಿಸಿದ್ದಾರೆ.