More

    ಬರದೂರಲ್ಲಿ ಮಳೆರಾಯನ ಜಪ

    ಕೆ.ಕೆಂಚಪ್ಪ ಮೊಳಕಾಲ್ಮೂರು
    ತಾಲೂಕಿನಾದ್ಯಂತ ಮುಂಗಾರಿನಲ್ಲಿ ಬಿತ್ತನೆ ಆಗಬೇಕಿದ್ದ 28.500 ಹೆಕ್ಟೇರ್ ಪ್ರದೇಶದ ಪೈಕಿ 5800 ಹೆಕ್ಟೇರ್ ಮಾತ್ರ ಬಿತ್ತನೆಯಾಗಿದ್ದು, ಉಳಿದಂತೆ ಶೇ. 90ರಷ್ಟು ರೈತರು ಇನ್ನೂ ಮಳೆರಾಯನ ಆಗಮನಕ್ಕೆ ಜಪ ಮಾಡುವಂತಾಗಿದೆ.

    ಜುಲೈ ತಿಂಗಳು ಮುಗಿಯುತ್ತಾ ಬಂದರೂ ತಾಲೂಕಿನಲ್ಲಿ ಹದಭರಿತ ಮಳೆಯಾಗಿಲ್ಲ. ಹೀಗಾಗಿ ಈ ಬಾರಿ ತಾಲೂಕಿನಲ್ಲಿ ಬರಗಾಲದ ಸ್ಪಷ್ಟ ಸೂಚನೆ ಸಿಕ್ಕಂತಾಗಿದೆ.

    ಶೇಂಗಾ, ಮೆಕ್ಕೇಜೋಳ, ತೊಗರಿ ಕೇವಲ 840 ಹೆ. ಬಿತ್ತನೆ ಆಗಿದೆ. ಅದಕ್ಕೂ ಮಳೆ ಕೊರತೆ ಹಿನ್ನೆಲೆ ರೈತರ ನಿದ್ದೆಗೆಡಿಸಿದೆ.

    ಇನ್ನು ಕಳೆದ ವರ್ಷ ಬಂಪರ್ ದರ ಕಂಡಿದ್ದ ಹತ್ತಿ ಲಾಭ ನೋಡಿದ ರೈತ ಈ ಬಾರಿ 4610 ಹೆ. ಪ್ರದೇಶದಲ್ಲಿ ಬೆಳೆದಿರುವ ಹತ್ತಿಗೂ ನಿರೀಕ್ಷಿತ ಧಾರಣೆ ಇಲ್ಲ.

    ಬೆಳೆಯೂ ರೋಗ ಬಾಧೆಗೆ ತುತ್ತಾಗಿ ಹಾಕಿದ ಬಂಡವಾಳ ಸಹಿತ ಕೈಸೇರುವ ನಂಬಿಕೆ ಇಲ್ಲದಂತಾಗಿದೆ.

    ತಾಲೂಕು ಮಳೆಯಾಶ್ರಿತ ಕೃಷಿ ಪ್ರಧಾನ ಪ್ರದೇಶ. ವರುಣನ ಕಣ್ಣಾಮುಚ್ಚಾಲೆ ಆಟದಲ್ಲಿ ಲಾಭಕ್ಕಿಂತ ಹೆಚ್ಚು ನಷ್ಟವನ್ನೇ ಅನುಭವಿಸುತ್ತಿರುವ ರೈತರ ಸಂಕಷ್ಟಕ್ಕೆ ಪಾರವೇ ಇಲ್ಲದಂತಾಗಿದೆ.

    ಕಳೆದ ವರ್ಷ ಖುಷಿ ತಂದ ಭರ್ಜರಿ ಮಳೆ ಈ ವರ್ಷ ಕೈಕೊಟ್ಟಿದೆ. ಮುಂಗಾರು ಆರಂಭದಲ್ಲಿ ಒಂದೆರಡು ಮಳೆ ಬಿಟ್ಟರೆ ಇಲ್ಲಿಯವರೆಗೆ ಮೋಡ ಮುಸುಕಿದ ವಾತಾವರಣದಲ್ಲೇ ತೃಪ್ತಿಪಡಿಸುತ್ತಿದೆ.

    ಜುಲೈ 15ರಿಂದ ಆ.5ರ ಅವಧಿಯಲ್ಲಿ ಬರುವ ಹಿರೇ ಪುಷ್ಯ, ಚಿಕ್ಕ ಪುಷ್ಯ ಹಾಗೂ ಅಸಲಿ ಮಳೆಗಾದರೂ ಶೇಂಗಾ ಬಿತ್ತನೆ

    ಮಾಡಿಕೊಂಡರಾಯಿತು ಎಂದು ಕನಸು ಕಾಣುತ್ತಿರುವ ರೈತರಿಗೆ ಅದೂ ಕೂಡ ಸ್ಪಷ್ಟತೆ ಕಾಣದಂತಾಗಿ ಆತಂಕದ ಛಾಯೆ ಆವರಿಸಿದೆ.

    ಜಾನುವಾರುಗಳಿಗೆ ಮೇವು, ನೀರಿನ ಕೊರತೆ ಉಂಟಾಗುವ ಸಾಧ್ಯತೆ ಇದೆ. ಅಡವಿಯಲ್ಲೂ ಒಂದು ಹಸಿ ಕಡ್ಡಿ ಕೂಡ ಸಿಗುತ್ತಿಲ್ಲ. ಕೆರೆ, ಕಟ್ಟೆಗಳಿಗೂ ನೀರಿನ ಅಭಾವ ತಲೆದೋರಿದೆ.

    ಪ್ರತಿ ವರ್ಷದಂತೆ 22.500 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಮಾಡುವ ವಾಡಿಕೆ ಇದೆ. ಪ್ರಸ್ತುತ 740 ಹೆ. ಮಾತ್ರ ಬಿತ್ತನೆ ಆಗಿದೆ.

    ಬೇಸಾಯ, ಬೀಜ, ಗೊಬ್ಬರ ಬಾಬ್ತು ಎಕರೆಗೆ 40 ಸಾವಿರಕ್ಕೂ ಅಧಿಕ ಖರ್ಚು ಬರಲಿದೆ. ಕೈಕೊಟ್ಟರೆ ಸಾಲ ಬಾಧೆ ದುಪ್ಪಟ್ಟಾಗುವ ಧಾವಂತದಲ್ಲಿ ರೈತರ ನಿದ್ದೆಗೆಡಿಸಿದೆ.

    ಪ್ರತಿ ವರ್ಷದ ಬೇಡಿಕೆಯಂತೆ 11 ಸಾವಿರ ಕ್ವಿಂಟಾಲ್ ಶೇಂಗಾ ಬೀಜ ದಾಸ್ತಾನು ಗುರಿ ಇಟ್ಟುಕೊಳ್ಳಲಾಗಿದೆ. ಪ್ರಸ್ತುತ ಬಂದಿರುವ 4250 ಕ್ವಿ. ಪೈಕಿ 3900 ಕ್ವಿ. ಖರ್ಚಾಗಿದೆ. ಆ.5ರ ವರೆಗೂ ಬಿತ್ತನೆ ವಾಡಿಕೆ ಇರುವ ಕಾರಣ ಅಷ್ಟರೊಳಗೆ ವರುಣ ಕೃಪೆ ತೋರುವ ನಂಬಿಕೆ ಇದೆ. ನಂತರ ಪರ್ಯಾಯ ಬೆಳೆ ಬೆಳೆಯಬಹುದು.
    ಡಾ. ಉಮೇಶ್ ಕೃಷಿ ಅಧಿಕಾರಿ.

    ಕಳೆದ ವರ್ಷದಂತೆ ಭರ್ಜರಿ ಮಳೆ ನಿರೀಕ್ಷೆ ಇಟ್ಟುಕೊಂಡು ಮುಂಗಾರಿನಲ್ಲಿ ತೊಗರಿ ಬಿತ್ತನೆ ಮಾಡಲಾಗಿದೆ. ಮಳೆ ಕೊರತೆಯಿಂದ ಅತಿಯಾದ ಒಣ ಹವೆಗೆ ತುತ್ತಾಗಿ ಬಾಡುತ್ತಿದೆ. ಬಹುತೇಕ ರೈತರು ಶೇಂಗಾ ಬಿತ್ತನೆಗಾಗಿ ಬೀಜ, ಗೊಬ್ಬರ ದಾಸ್ತಾನು ಮಾಡಿಕೊಂಡು ವರುಣನ ಕೃಪೆಗೆ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
    ಓಬಣ್ಣ ಹಾನಗಲ್ ರೈತ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts