ಶಿರಸಿ: ತಾಲೂಕಿನ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳು ನೂತನ ಶಿಷ್ಯರ ಸ್ವೀಕಾರಕ್ಕೆ ತೀರ್ಮಾನಿಸಿ, ನೇಮಕಗೊಳಿಸಿದ್ದಾರೆ.
ಯಲ್ಲಾಪುರ ತಾಲೂಕಿನ ಈರಾಪುರ ತಾಲೂಕಿನ ಗಂಗೇಮನೆಯ ವಿದ್ವಾನ್ ನಾಗರಾಜ ಭಟ್ಟ ಅವರನ್ನು ಶ್ರೀಗಳ ಶಿಷ್ಯರಾಗಿ ಸ್ವೀಕರಿಸಲು ತೀರ್ಮಾನಿಸಲಾಗಿದೆ.
ನಾಗರಾಜ್ ಭಟ್ಟ ಅವರನ್ನು ಶ್ರೀಗಳ ಶಿಷ್ಯರನ್ನಾಗಿ ಸ್ವೀಕರಿಸಲು ಡಿ.25ರಂದು ಶ್ರೀ ಮಠದಲ್ಲಿ ನಡೆದ ಆಡಳಿತ ಮಂಡಳಿ ಸಭೆ ಕೂಡ ನಿರ್ಣಯಿಸಿ ಸಮ್ಮತಿಸಿದೆ. ಶಿಷ್ಯ ಸ್ವೀಕಾರದ ಕಾರ್ಯಕ್ರಮ ಮಾಘ ಶುದ್ಧ ತ್ರಯೋದಶಿ ಫೆ.22ರಂದು ನಡೆಸಲು ತೀರ್ಮಾನಿಸಲಾಗಿದೆ
ಆಧ್ಯಾತ್ಮ, ಧಾರ್ಮಿಕ, ಸಮಾಜಮುಖಿ, ಶೈಕ್ಷಣಿಕ, ಪರಿಸರದ ಸಂರಕ್ಷಣೆ, ಭಗವದ್ಗೀತಾ ಅಭಿಯಾನದಲ್ಲಿ ಮುಂಚೂಣಿಯಲ್ಲಿರುವ ಸ್ವರ್ಣವಲ್ಲೀ ಶ್ರೀಗಳ ಅಪೇಕ್ಷೆ ಹಾಗೂ ಸೂಚನೆಯಂತೆ ಕಳೆದ ಹಲವು ವರ್ಷಗಳಿಂದ ಶಿಷ್ಯರ ಹುಡುಕಾಟ ನಡೆದಿತ್ತು. ಜೋತಿಷ್ಯರ ಸಲಹೆ, ಸೂಚನೆ ಪಡೆದು ಶಿಷ್ಯರನ್ನು ಅಂತಿಮಗೊಳಿಸಲಾಗಿದೆ.
ಸ್ವರ್ಣವಲ್ಲೀ ಮಠದಲ್ಲೇ ಕಳೆದ ಒಂದು ದಶಕಗಳಿಂದ ವೇದಾಧ್ಯಯನ ನಡೆಸಿ, ಇದೀಗ ವೇದಾಂತ ಶಾಸ್ತ್ರ ಅಧ್ಯಯನ ಮಾಡುತ್ತಿರುವ 23ರ ವಯೋಮಾನದ ನಾಗರಾಜ್ ಭಟ್ಟ ಅವರು ಗಣಪತಿ ಭಟ್ಟ ಹಾಗೂ ಭುವನೇಶ್ವರಿ ಅವರ ಪ್ರಥಮ ಪುತ್ರರು.
ಮೂಲತಃ ಈರಾಪುರ ಗಂಗೆಮನೆಯ ಕೃಷಿ ಕುಟುಂಬದ ನಾಗರಾಜ ಭಟ್ಟ ಅವರಿಗೆ ಮೊದಲಿಂದಲೂ ಆಧ್ಯಾತ್ಮದ ಆಸಕ್ತಿ ಇತ್ತು. ಸ್ವರ್ಣವಲ್ಲೀ ಮಠದಲ್ಲೀ ಅತ್ಯಂತ ಆಸಕ್ತಿಯಿಂದ ವೇದಾಧ್ಯಯನ, ವೇದಾಂತ ಶಾಸ್ತ್ರ ಅಧ್ಯಯನ ಮಾಡುತ್ತಿದ್ದು, ನಾಗರಾಜ ಭಟ್ಟ ಅವರ ಕುಂಡಲಿಯನ್ನೂ ಮೂರು ಪ್ರಮುಖ ಜೋತಿಷ್ಯ ರತ್ನರ ಮೂಲಕ ಪರಿಶೀಲಿಸಿ ಒಪ್ಪಿಗೆ ಪಡೆದು ನೇಮಕ ಮಾಡಲಾಗಿದೆ. ನಾಗರಾಜ್ ಭಟ್ಟ ಅವರ ಸಹೋದರ ಉಡುಪಿಯಲ್ಲಿ ಜೋತಿಷ್ಯ ಶಾಸ್ತ್ರ ಅಧ್ಯಯನ ನಡೆಸುತ್ತಿದ್ದಾರೆ ಎಂದು ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಳ್ಳಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.