ಜಿಲ್ಲೆ

ದೇವರಲ್ಲಿ ಮನಸ್ಸಿಡುವುದರಿಂದ ಸಮಸ್ಯೆ ಪರಿಹಾರ

Uttara Kannada - Subash Hegde

ಶಿರಸಿ: ದೇವರಲ್ಲಿ ಪೂರ್ತಿಯಾಗಿ ಮನಸ್ಸಿಡುವುದರಿಂದ ಸಮಸ್ಯೆ ಪರಿಹಾರವಾಗಲಿದೆ ಎಂದು ಸೋಂದಾ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ಸ್ವರ್ಣವಲ್ಲೀ ಮಠದಲ್ಲಿ ತಮ್ಮ 34 ನೇ ಹಾಗೂ ಕಿರಿಯ ಸ್ವಾಮೀಜಿ ಶ್ರೀ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿಗಳ ಪ್ರಥಮ ಚಾತುರ್ಮಾಸ್ಯ ವ್ರತಾಚರಣೆಯಲ್ಲಿ ಸೇವೆ ಸಲ್ಲಿಸಿದ ಭಂಡಾರಿ ಸಮಾಜದವರ ಸಮಸ್ತ ಭಕ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. ಸಂಸಾರಿಗಳಿಗೆ ಅನೇಕ ಸಮಸ್ಯೆಗಳು ಇರುತ್ತವೆ. ಆ ಸಮಸ್ಯೆಗಳ ಮಧ್ಯದಲ್ಲಿ ದೇವರಲ್ಲಿ ಮನಸ್ಸಿಡುವುದು ಬಹಳ ಮುಖ್ಯ. ಎಲ್ಲೆಲ್ಲೋ ಓಡಾಡುತ್ತಿರುವ ಮನಸ್ಸನ್ನು ದೇವರ ಧ್ಯಾನದಲ್ಲಿ ಪೂರ್ತಿಯಾಗಿ ತೊಡಗುವ ಹಾಗೆ ಮಾಡಬೇಕು. ಸಂಸಾರ ಎನ್ನುವುದು ಒಂದು ಪ್ರವಾಹ ಇದ್ದ ಹಾಗೆ ನಮ್ಮನ್ನು ತೇಲಿಸಿಕೊಂಡು ಹೋಗುವಂತಹ ಚಿಂತೆಗಳು ನಮ್ಮನ್ನು ಬಾಧಿಸುತ್ತ ಇರುತ್ತವೆ. ನಮ್ಮ ನಿದ್ರೆ,ಕೆಲಸಗಳಿಗೆ ಭಂಗವನ್ನು ಉಂಟುಮಾಡುತ್ತವೆ. ಈ ಪ್ರವಾಹದಲ್ಲಿ ದುರ್ಬಲ ಮನಸ್ಸಿನ ವ್ಯಕ್ತಿಗಳು ಸಿಲುಕಿಕೊಂಡು ಆಚೆ ಬರಲು ಸಾಧ್ಯವಾಗುವುದಿಲ್ಲ. ಯಾರು ಈ ಸಂಸಾರವೆಂಬ ಪ್ರವಾಹದ ಎದುರು ನಿಂತು ಅದನ್ನು ಎದುರಿಸುತ್ತಾರೋ ಅವರು ಧೀರನೆನಿಸುತ್ತಾರೆ. ದೇವರಲ್ಲಿ ಮನಸ್ಸಿಡುವುದರ ಮೂಲಕ ಆ ಪ್ರಹಾವವನ್ನು ದಾಟಬೇಕು. ಅವನು ಎಲ್ಲಾ ಕಾರ್ಯದಲ್ಲೂ ಜಯಿಸುತ್ತಾನೆ ಎಂದರು.
ಈ ಸಂದರ್ಭದಲ್ಲಿ ಶ್ರೀ ಮಠದ ಪರಂಪರಾಗತವಾಗಿ ಬಂದ ಭಂಡಾರಿ ಸಮಾಜದ ಪ್ರಮುಖರು ಹಾಗೂ ಹೊರ ಊರಿನ ಪ್ರಮುಖರು ವಿಶೇಷವಾಗಿ ಮಂಜಗುಣಿಯ ವಾದ್ಯ ಸೇವೆಯ ಪ್ರಮುಖರು ಶ್ರೀಮಠಕ್ಕೆ ಆಗಮಿಸಿ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ಹಾಗೂ ಶ್ರೀ ಆನಂದಬೋಧೇಂದ್ರ ಸರಸ್ವತೀ ಸ್ವಾಮಿಗಳ ಚಾತುರ್ಮಾಸ್ಯದ ಸಂದರ್ಭದಲ್ಲಿ ತಮ್ಮ ಸೇವೆಯನ್ನು ಉಭಯ ಶ್ರೀಗಳವರಿಗೆ ಸಲ್ಲಿಸಿದರು.