ಜಿಲ್ಲೆ

ಪಿಎಚ್‌ಸಿಗಳಿಗೆ ಸೋಲಾರ್ ಬೆಳಕು: 61 ಆರೋಗ್ಯ ಕೇಂದ್ರಗಳಿಗೆ ಅಳವಡಿಕೆ

ಇಂದಿರಾ ಎನ್ ಕೆ

ಹರಿಪ್ರಸಾದ್ ನಂದಳಿಕೆ ಕಾರ್ಕಳ

ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸೇವೆ ನೀಡುವ ಉಡುಪಿ ಜಿಲ್ಲೆ ಒಟ್ಟು 61 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸೋಲಾರ್ ಅಳವಡಿಸುವ ಮೂಲಕ ಈ ಬಾರಿ ಸ್ವಾತಂತ್ರೊೃೀತ್ಸವ ಸಂಭ್ರಮ ಆಚರಿಸಲು ಉಡುಪಿ ಸೆಲ್ಕೋ ಸೋಲಾರ್ ಸಂಸ್ಥೆ ಹಾಗೂ ಸ್ಥಳೀಯ ಸಂಸ್ಥೆ ಮುಂದಾಗಿದೆ.
ಮಳೆಗಾಲದಲ್ಲಿ ಗಾಳಿ ಗುಡುಗು ಮಳೆಯಿಂದ ಪದೇಪದೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗುವುದು ಸಾಮಾನ್ಯ. ವಿದ್ಯುತ್ ಕಂಬಗಳಿಗೆ ಹಾನಿಯಾಗಿ ಸರಬರಾಜಾಗುವುದು ಸಾಕಷ್ಟು ಹೊತ್ತಿನ ಬಳಿಕ. ಹೀಗಾಗಿ ಕತ್ತಲಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿರಬಾರದು ಹಾಗೂ ವಿದ್ಯುತ್ ಉಳಿತಾಯದ ದೃಷ್ಟಿಯಿಂದ ಈ ಯೋಜನೆ ವಿವಿಧ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ.

ರಾಜ್ಯದಲ್ಲೇ ಮೊದಲು ಉಡುಪಿ

ಉಡುಪಿ ಜಿಲ್ಲೆಯಲ್ಲಿ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರವೊಂದಕ್ಕೆ 5 ಲಕ್ಷ ರೂ. ವೆಚ್ಚದ ಸೋಲಾರ್ ವ್ಯವಸ್ಥೆ ಅಳವಡಿಸಲಾಗಿದ್ದು, ಬಹುತೇಕ ಕಡೆಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಜಿಲ್ಲೆಯ 52 ಪ್ರಾಥಮಿಕ ಆರೋಗ್ಯ ಕೇಂದ್ರ, 1 ಉಪ ಆರೋಗ್ಯ ಕೇಂದ್ರ, 1 ಆಯುರ್ವೇದ ಸೆಂಟರ್, 1 ಜಿಲ್ಲೆಯ ಮುಖ್ಯ ಮಲೇರಿಯಾ ಸೆಂಟರ್‌ಗೆ ಅಳವಡಿಸಲಾಗಿದೆ. ಉಳಿದ 6 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸ್ವಾತಂತ್ರೊೃೀತ್ಸವ ಮುನ್ನ ಅಳವಡಿಕೆ ಕಾಮಗಾರಿ ನಡೆಯಲಿದೆ. ಜಿಲ್ಲೆಯ ಒಟ್ಟು 61 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸ್ವಾತಂತ್ರೊೃೀತ್ಸವದಂದು ಸೋಲಾರ್ ಅಳವಡಿಕೆ ಪೂರ್ಣಗೊಂಡು ಆರೋಗ್ಯ ಕೇಂದ್ರ ಬೆಳಗಲಿದೆ. ಈ ವಿಶೇಷ ಯೋಜನೆ ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಳವಡಿಸಿರುವುದು ಇಡೀ ರಾಜ್ಯದಲ್ಲೇ ಉಡುಪಿ ಮೊದಲ ಸ್ಥಾನದಲ್ಲಿದೆ ಎನ್ನುವುದು ಸಂಸ್ಥೆ ಅಧಿಕಾರಿಗಳ ಮಾತು.

ಸಹಕಾರ ನೀಡುವ 17 ಸಂಸ್ಥೆಗಳು

ಉಡುಪಿ ಜಿಲ್ಲೆಯಲ್ಲಿ ಸ್ಥಳೀಯ ಖಾಸಗಿ ಸಂಸ್ಥೆಗಳ ಸಹಯೋಗದೊಂದಿಗೆ ರಾಜ್ಯದಲ್ಲಿ ಮೊದಲ ಬಾರಿಗೆ ಬೃಹತ್ ಪ್ರಮಾಣದಲ್ಲಿ ಸೋಲಾರ್ ಅಳವಡಿಕೆ ಯೋಜನೆ ಹಮ್ಮಿಕೊಂಡ ಸೆಲ್ಕೋ ಸೋಲಾರ್ ಸಂಸ್ಥೆ ಜತೆ ಜಿಲ್ಲೆ ಪ್ರತಿಷ್ಠಿತ 17 ಸಂಘ ಸಂಸ್ಥೆಗಳು ಕೈಜೋಡಿಸಿವೆ. ಪ್ರತಿ ಕೇಂದ್ರದ ಸೋಲಾರ್ ಅಳವಡಿಕೆ ಯೋಜನೆಗೆ 5 ಲಕ್ಷ ರೂ. ವೆಚ್ಚ ತಗುಲಲಿದ್ದು, ಒಟ್ಟು ಖರ್ಚಿನ ಶೇ.50 ಹಣ ಸೆಲ್ಕೋ ಸೋಲಾರ್ ಸಂಸ್ಥೆ ಒದಗಿಸುತ್ತಿದ್ದು, ಉಳಿದ ಶೇ.50 ವೆಚ್ಚವನ್ನು ವಿವಿಧ 17 ಸಂಘ ಸಂಸ್ಥೆ ನೆರವು ನೀಡಲಿದೆ.

ರಾಜ್ಯ ಮಟ್ಟದಲ್ಲಿ ವಿಸ್ತರಣೆ

ರಾಜ್ಯದಲ್ಲಿರುವ 2,500 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ ಈಗಾಗಲೇ 1152 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸೆಲ್ಕೋ ಫೌಂಡೇಷನ್ ಹಾಗೂ ರಾಜ್ಯ ಸರ್ಕಾರ ಸಹಯೋಗದಲ್ಲಿ ಸೋಲಾರ್ ವ್ಯವಸ್ಥೆ ಕಲ್ಪಿಸುತ್ತಿದೆ. ಮಧ್ಯ ಕರ್ನಾಟಕ, ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕದ ಭಾಗಗಳಲ್ಲಿ ರಾಜ್ಯ ಸರ್ಕಾರ ಹಾಗೂ ಸೆಲ್ಕೋ ಸೋಲಾರ್ ಸಹಯೋಗದಲ್ಲಿ ಸೋಲಾರ್ ಅಳವಡಿಕೆ ಮಾಡಲಾಗುತಿದ್ದು, ಒಟ್ಟು 18 ಜಿಲ್ಲೆಗಳಲ್ಲಿ ಯಶಸ್ವಿಯಾಗಿ ನಡೆದಿದೆ. ಮುಂದಿನ ದಿನಗಳಲ್ಲಿ ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೋಲಾರ್ ಅಳವಡಿಕೆ ಕಾಮಗಾರಿ ಪೂರ್ಣಗೊಳ್ಳಲಿದೆ.

ಲಕ್ಷಾಂತರ ರೂಪಾಯಿ ಉಳಿತಾಯ

2021ರಲ್ಲಿ ಉಡುಪಿ ಜಿಲ್ಲೆಯ ಅಂದಿನ ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ ಸೆಲ್ಕೋ ಇಂಡಿಯಾ ಸಂಸ್ಥೆ ಕ್ರಾಂತಿಗೆ ಮುನ್ನುಡಿ ಬರೆದರು. ಸೋಲಾರ್ ಅಳವಡಿಕೆ ಮೊದಲು 61 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ತಿಂಗಳೊಂದಕ್ಕೆ 5 ಲಕ್ಷಕ್ಕೂ ಹೆಚ್ಚು ಮೌಲ್ಯದ ವಿದ್ಯುತ್ ಬಿಲ್ ಮೆಸ್ಕಾಂಗೆ ಪಾವತಿಯಾಗುತ್ತಿದೆ. ಆದರೆ ಈ ಸೋಲಾರ್ ಅಳವಡಿಕೆಯಿಂದ ಲಕ್ಷಾಂತರ ಬಿಲ್ ಮುಂದಿನ ದಿನಗಳಲ್ಲಿ ಉಳಿತಾಯವಾಗಲಿದೆ. ದಿನದ 24 ಗಂಟೆಯೂ ಸೌರ ವಿದ್ಯುತ್ ಪೂರೈಕೆಯಾಗುತ್ತಿದೆ.

ಹಳ್ಳಿಹೊಳೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರಂಭಗೊಂಡ ಅಭಿಯಾನ ಇಂದು ಉಡುಪಿ ಜಿಲ್ಲೆಯ ಒಟ್ಟು 61 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೋಲಾರ್ ಮೂಲ ಬೆಳಕಾಗಿರುವುದು ಖುಷಿ ತಂದಿದೆ. ಸೆಲ್ಕೋ ಸೋಲಾರ್ ಹಾಗೂ ಇತರ ಸಂಘ ಸಂಸ್ಥೆಗಳ ಸೇವಾ ಕಾರ್ಯ ಮೆಚ್ಚುವಂಥದ್ದು.-ಡಾ.ನಾಗಭೂಷಣ ಉಡುಪ ನಿಕಟಪೂರ್ವ ಜಿಲ್ಲಾ ವೈದ್ಯಾಧಿಕಾರಿ
ಗ್ರೀನ್ ಎನರ್ಜಿಗೆ ಸ್ವಾತಂತ್ರೊೃೀತ್ಸವದ ಉಡುಗೊರೆೆ. ಸೇವಾ ಸಂಸ್ಥೆಗಳ ಸಹಕಾರದಿಂದ ಉಡುಪಿ ಜಿಲ್ಲೆಯ 61 ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಲಾರ್ ಅಳವಡಿಸುವ ಕಾರ್ಯ ನಡೆದಿದೆ. ಇಂತಹ ಯೋಜನೆ ನಿಜಕ್ಕೂ ಉಪಯುಕ್ತವಾಗಿದೆ.-ಡಾ.ಈಶ್ವರ್ ಗಡದ್ ಜಿಲ್ಲಾ ಆರೋಗ್ಯಾಧಿಕಾರಿ ಉಡುಪಿ
ಸೌರಶಕ್ತಿ ಪ್ರಕೃತಿಗೆ ಪೂರಕವಾಗಿ ಬದುಕಲು ಸಹಕಾರಿಯಾಗಿದೆ. ಜನರಿಗೆ ಸಕಾಲದಲ್ಲಿ ಸಮರ್ಪಕವಾಗಿ ಉತ್ತಮ ಆರೋಗ್ಯ ಸೇವೆ ನೀಡುವುದೆ ನಮ್ಮ ಮೊದಲ ಗುರಿ. ಹೀಗಾಗಿ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸೌರಶಕ್ತಿ ಒದಗಿಸುವ ವಿಶೇಷ ಯೋಜನೆ ಹಮ್ಮಿಕೊಂಡಿದ್ದೇವೆ.-ಗುರುಪ್ರಕಾಶ್ ಶೆಟ್ಟಿ ಡಿಜಿಎಂ ಸೆಲ್ಕೋ ಸೋಲಾರ್