ಬೆಳ್ತಂಗಡಿ: ಯುವವಾಹಿನಿ ಅವಕಾಶಗಳ ಬಿಂದು. ಸಮುದಾಯದ ಬಗೆಗೆ ಪ್ರೀತಿ ಬೆಳೆಸುವ ಸಂಘಟನೆ ಬೆಳಕಿನ ಶಕ್ತಿ. ಅದರಲ್ಲಿ ಅವಕಾಶ ಪಡೆದ ಪ್ರತಿಯೊಬ್ಬರೂ ಸಂಘಟನೆಗೆ ಪೂರಕವಾದ ಸಮಾಜ ಮೆಚ್ಚುವ ಒಂದಿಲ್ಲೊಂದು ಕೆಲಸ ಮಾಡಿ ತೋರಿಸಬೇಕು. ಅದುವೇ ಸಂಘಟನೆಗೆ ಸೇರಿದ್ದಕ್ಕೆ ನಾವು ಮಾಡುವ ಸಾರ್ಥಕ ಕಾರ್ಯ ಎಂದು ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ.ಸುವರ್ಣ ಹೇಳಿದರು. ಭಾನುವಾರ ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾಭವನದಲ್ಲಿ ಬೆಳ್ತಂಗಡಿ ಯುವವಾಹಿನಿ ಘಟಕದ ಗುರುರಾಜ್ ಗುರಿಪಳ್ಳ ನೇತೃತ್ವದ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ಮಾತನಾಡಿ, ಯುವವಾಹಿನಿ ಸಾಮಾನ್ಯ ಕುಟುಂಬದ ಯುವಕರಿಗೆ ತರಬೇತಿ ನೀಡಿ ಅವರನ್ನು ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕವಾಗಿ ಬೆಳೆಸುತ್ತಿದೆ. ನಾರಾಯಣಗುರುಗಳ ತತ್ವ ಆದರ್ಶದಲ್ಲಿ ಅವರ ಮೇಲೆ ನಂಬಿಕೆಯಿರಿಸಿ ನಾವು ಸಾಗಿದಾಗ ನಮ್ಮ ನಾಲ್ಕು ಹೆಜ್ಜೆಗೆ ನಾರಾಯಣ ಗುರುಗಳು ಹತ್ತು ಹೆಜ್ಜೆ ಮುಂದೆ ಕೊಂಡೊಯ್ಯುತ್ತಾರೆ. ಹಿರಿಯರ ಮಾರ್ಗದರ್ಶನದಲ್ಲಿ ಬೆಳೆಯುತ್ತಿರುವ ಯುವವಾಹಿನಿ ಸಂಘಟನೆ ಈ ಜಿಲ್ಲೆ, ರಾಜ್ಯದ ಕಣ್ಮಣಿಯಾಗಿ ಬೆಳೆಯಲಿ ಎಂದರು. ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಂ ಕಲ್ಲಾಪು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಘಟಕದ ಅಧ್ಯಕ್ಷ ಸದಾಶಿವ ಊರ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಸುಂದರ ಪೂಜಾರಿ, ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಅರುಣ್ ಮಾಂಜ, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಎಂ.ಕೆ.ಪ್ರಸಾದ್, ಯುವವಾಹಿನಿ ಮಹಿಳಾ ಸಂಚಲನಾ ಸಮಿತಿಯ ಪ್ರಧಾನ ಸಂಚಾಲಕಿ ಲೀಲಾವತಿ ಪಣಕಜೆ ಉಪಸ್ಥಿತರಿದ್ದರು. ಘಟಕದ ಮಾಜಿ ಅಧ್ಯಕ್ಷ ಎಂ.ಕೆ.ಪ್ರಸಾದ್ ಸ್ವಾಗತಿಸಿದರು. ಅಶ್ವಥ್ ಕುಮಾರ್ ಪದಪ್ರದಾನ ನಿರೂಪಿಸಿದರು. ಕಾರ್ಯದರ್ಶಿ ಯಶೋಧರ ಮುಂಡಾಜೆ ವಾರ್ಷಿಕ ವರದಿ ಮಂಡಿಸಿದರು. ಸುಜಾತಾ ಅಣ್ಣಿ ಪೂಜಾರಿ ಸನ್ಮಾನಪತ್ರ ವಾಚಿಸಿದರು. ಸುಧಾಮಣಿ ರಮಾನಂದ್ ನಿರೂಪಿಸಿದರು. ನೂತನ ಕಾರ್ಯದರ್ಶಿ ಮಧುರಾ ರಾಘವ್ ವಂದಿಸಿದರು. ವಿದ್ಯಾನಿಧಿ, ಸಾಂತ್ವನ ನಿಧಿ ವಿತರಣೆ ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಲೋಕೇಶ್ ಕೋಟ್ಯಾನ್ ಕೂಳೂರು ಪದಪ್ರದಾನ ನಡೆಸಿಕೊಟ್ಟರು. ವಿದ್ಯಾನಿಧಿ, ಸಾಂತ್ವನ ನಿಧಿ ವಿತರಿಸಲಾಯಿತು. ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಸ್ಮಿತೇಶ್ ಎಸ್.ಬಾರ್ಯ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ದಯಾನಂದ ಲಾಯಿಲ, ಬಳಂಜ ಬ್ರಹ್ಮ ಶ್ರೀ ನಾರಾಯಣಗುರು ಸೇವಾ ಸಮಿತಿ, ರಾಷ್ಟ್ರಮಟ್ಟದ ಕರಾಟೆಪಟು ಶ್ರೇಯಸ್ ಪೂಜಾರಿ ಅವರನ್ನು ಯುವವಾಹಿನಿ ವತಿಯಿಂದ ಗೌರವಿಸಲಾಯಿತು.
ಸಮಾಜದಲ್ಲಿ ವ್ಯವಸ್ಥೆಗಿಂತ ನಮ್ಮ ಮನಸ್ಥಿತಿ ಬದಲಾಗಬೇಕಾದ ಅಗತ್ಯವಿದೆ. ಪ್ರತಿಭೆಗಳನ್ನು ಬೆಳೆದಾಗ ಗುರುತಿಸಿ ಸನ್ಮಾನಿಸುವುದಲ್ಲ, ಎಲ್ಲೋ ಮೂಲೆಯಲ್ಲಿರುವ ಅವರನ್ನು ಬೆಳೆಸುವ ಕೆಲಸವಾಗಬೇಕು. ಸಂಘಟನೆಗೆ ಬಂಡವಾಳ ಹಾಕುವವರ ಅಗತ್ಯವಿದ್ದು, ಅಂತಹ ಉದ್ಯಮಿಗಳ ಸಮ್ಮೇಳನ ಯುವವಾಹಿನಿ ಕೇಂದ್ರ ಸಮಿತಿ ಮೂಲಕ ನಡೆದು ಯುವ ಸಮುದಾಯಕ್ಕೆ ಉದ್ಯೋಗದ ಅವಕಾಶ ಸಿಗುವಂತಾಗಲಿ. ಸಂಪತ್ ಬಿ.ಸುವರ್ಣ, ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ