ಬೆಳ್ತಂಗಡಿ: ಶತಮಾನಗಳಾಚೆ ದುರ್ಬಲರ ಶೋಷಣೆ, ಶಿಕ್ಷಣದಲ್ಲಿ ಅವಕಾಶ, ಮೂಢನಂಬಿಕೆ ಸೇರಿದಂತೆ ಅನೇಕ ಸಾಮಾಜಿಕ ಅಸಮಾನತೆಯಿಂದ ಜನರು ತುಳಿತಕ್ಕೆ ಒಳಗಾಗಿದ್ದರು. ಸರ್ವರಿಗೂ ಸಮಪಾಲು, ಸಮಬಾಳು ಒದಗಿಸಲು ಮಡಿವಾಳ ಮಾಚಿದೇವರು ಸಾಮಾಜಕ ಕ್ರಾಂತಿಯನ್ನೇ ನಡೆಸಿರುವರು ಎಂದು ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್ ಹೇಳಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಬೆಳ್ತಂಗಡಿ ತಾಲೂಕು ಆಡಳಿತದ ವತಿಯಿಂದ ತಾಲೂಕು ಆಡಳಿತ ಸೌಧ ಸಭಾಂಗಣದಲ್ಲಿ ನಡೆದ ಮಡಿವಾಳ ಮಾಚಿದೇವ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಮುಂಡಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಹಶಿಕ್ಷಕ ಅರವಿಂದ ಚೊಕ್ಕಾಡಿ ಮಾತನಾಡಿ, ಜ್ಞಾನ ಮಾರ್ಗ, ಭಕ್ತಿ ಮಾರ್ಗ, ಕರ್ಮ ಮಾರ್ಗದ ಮೂಲಕ ಭಕ್ತಿ ಪರಂಪರೆ ಬೆಳೆದು ಬಂದಿದೆ. ಶರಣ ಪರಂಪರೆ ಭಕ್ತಿ ಮಾರ್ಗ ಮತ್ತು ಕರ್ಮ ಮಾರ್ಗ ಎರಡನ್ನು ಜತೆಗೂಡಿಸಿದೆ. ಭಾರತದ ಸಾಮಾಜಿಕ ರಚನಾ ಕ್ರಮದಲ್ಲಿ ವರ್ಣಗಳ ರಚನೆ ಧಾರ್ಮಿಕವಾದುದು. ವರ್ಣ ಒಂದೇ ಇದ್ದರೆ ಜಾತಿ 6 ಸಾವಿರವಿದೆ. ಹಾಗಾಗಿ ಭಕ್ತಿ ಆಚರಣೆಗೆ ಸೀಮಿತವಾಗದೆ ಅನುಸರಿಸುವಂತಾಗಬೇಕು ಎಂದರು.
ತಹಸೀಲ್ದಾರ್ ಪೃಥ್ವಿ ಸಾನಿಕಂ ಅಧ್ಯಕ್ಷತೆ ವಹಿಸಿದರು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಾಜೇಶ್ ಕೆ., ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್, ಬೆಳ್ತಂಗಡಿ ತಾಲೂಕು ಮಡಿವಾಳ ಸಮಾಜ ಸೇವಾ ಸಂಘದ ಅಧ್ಯಕ್ಷ ಶ್ರೀಧರ್ ಮಡಿವಾಳ, ಶಶಿಧರ್ ಕಲ್ಮಂಜ ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆಯ ಹೇಮಲತಾ ನಿರೂಪಿಸಿ, ಸ್ವಾಗತಿಸಿದರು. ಗ್ರಾಮ ಆಡಳಿತಾಧಿಕಾರಿ ಹೇಮಾ ವಂದಿಸಿದರು.