ಹರಪನಹಳ್ಳಿ: ಸಮಾಜದಲ್ಲಿ ಶಾಂತಿ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಎಸ್ಪಿ ಅರುಣಾಂಗ್ಷು ಗಿರಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆಯಲ್ಲಿ ಶುಕ್ರವಾರ ಮಾತನಾಡಿದರು. ಸಾಮಾಜಿಕ ಜಾಲತಾಣ ದುರ್ಬಳಕೆ ಮಾಡಿಕೊಂಡರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಡಿವೈಎಸ್ಪಿ ವೆಂಕಟಪ್ಪ ನಾಯಕ ಮಾತನಾಡಿ, ಗಣೇಶ ಪ್ರತಿಷ್ಠಾಪನೆ ಸಮಿತಿ ನಾಲ್ಕು ಜನ ಸ್ವಯಂ ಸೇವಕರನ್ನು ನಿಯೋಜನೆಗೊಳಿಸಬೇಕು. ಮೂರ್ತಿಗಳ ಪ್ರತಿಷ್ಠಾಪನೆಗೆ ಗ್ರಾಪಂ ಮತ್ತು ಪುರಸಭೆ ಮುಖ್ಯಾಧಿಕಾರಿಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದರು.
ತಾಲೂಕಿನಲ್ಲಿ 917 ಕಡೆ ಗಣೇಶ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಪೊಲೀಸ್ ಸಿಬ್ಬಂದಿ ಕಡಿಮೆ ಇರುವುದರಿಂದ ಸಾರ್ವಜನಿಕರು ಶಾಂತಿ ಕಾಪಾಡಬೇಕು. ಪ್ಲೆಕ್ಸ್ ಹಾಕುವವರು ಅನುಮತಿ ಪಡೆಯಬೇಕು. ಅಹಿತಕರ ಘಟನೆಗಳ ತಡೆಗೆ ತಾಲೂಕಿನಲ್ಲಿ 2190 ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಸುಪ್ರೀಂಕೋರ್ಟ್ ಆದೇಶದಂತೆ ರಾತ್ರಿ 10 ಗಂಟೆ ಒಳಗಡೆ ಗಣೇಶ ವಿಸರ್ಜನೆ ಮಾಡಬೇಕು ಎಂದರು.
ತಹಸೀಲ್ದಾರ ಬಿ.ವಿ.ಗಿರೀಶಬಾಬು, ತಾ.ಪಂ ಇಒ ಚಂದ್ರಶೇಖರ, ಪುರಸಭೆ ಮುಖ್ಯಾಧಿಕಾರಿ ರೇಣುಕಾ ಎಸ್.ದೇಸಾಯಿ, ವಿಶ್ವ ಹಿಂದು ಪರಿಷತ್ ಮುಖಂಡ ಎಚ್.ಎಂ.ಜಗದೀಶ, ಪ್ರಮುಖರಾದ ಅರಸೀಕೆರೆ ಸಲಾಂ ಸಾಹೇಬ್, ಕುಂಚೂರು ಇಬ್ರಾಹಿಂ, ಅಂಜುಮನ್ ಸಮಿತಿ ಮಾಜಿ ಅಧ್ಯಕ್ಷ ಎಂ.ಜಾವೇದ್, ಸಿಪಿಐ ಮಹಾಂತೇಶ ಸಜ್ಜನ್, ಪಿಎಸ್‌ಐಗಳಾದ ಶಂಭುಲಿಂಗ ಹಿರೇಮಠ, ಕಿರಣ್ ಕುಮಾರ, ವಿಜಯಕೃಷ್ಣ, ನಾಗರತ್ನಮ್ಮ , ಅಗ್ನಿಶಾಮಕದಳದ ಅಧಿಕಾರಿ ನರಸಪ್ಪ ಇತರರಿದ್ದರು.