ಜಿಲ್ಲೆ

ಸಾರ್ವಜನಿಕ ವಿತರಣಾ ವ್ಯವಸ್ಥೆ ಸುಧಾರಣೆಗೆ ‘ಸ್ಮಾರ್ಟ್ ಪಿಡಿಎಸ್’ ಯೋಜನೆ

ಹರೀಶ್​​ ಕೆ.ಸಿ.

ಬೆಂಗಳೂರು:ಸಾರ್ವಜನಿಕ ವಿತರಣಾ ವ್ಯವಸ್ಥೆ(ಪಿಡಿಎಸ್) ಅಡಿ ನ್ಯಾಯಬೆಲೆ ಅಂಗಡಿಗಳಲ್ಲಿ ಆಧುನಿಕ ತಂತ್ರಜ್ಞಾನ ಮೂಲಕ ಕಾರ್ಡ್‌ದಾರರಿಗೆ ಪಡಿತರ ವಿತರಿಸಲು ಸರ್ಕಾರ ಹಲವು ಕ್ರಮ ತೆಗೆದುಕೊಳ್ಳುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ಆಹಾರ ಇಲಾಖೆಯಲ್ಲಿ ‘ಸ್ಮಾರ್ಟ್ ಪಿಡಿಎಸ್’ ಯೋಜನೆ ಅನುಷ್ಠಾನಕ್ಕಾಗಿ ಈಗಾಗಲೇ ಪ್ರಕ್ರಿಯೆ ಶುರುವಾಗಿದೆ. ಈ ಯೋಜನೆಯಡಿ ಮೂಲಸೌಕರ್ಯ ಕಲ್ಪಿಸಲು, ನಿರ್ವಹಣೆಗೆ 35 ಕೋಟಿ ರೂ.ಅನುದಾನ ನೀಡುವಂತೆ ಇಲಾಖೆ, ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ರಾಜ್ಯದಲ್ಲಿ 1.28 ಕೋಟಿ ಬಿಪಿಎಲ್,10.80 ಲಕ್ಷ ಅಂತ್ಯೋದಯ ಕಾರ್ಡ್‌ಗಳಿಂದ ಒಟ್ಟು 4.11 ಕೋಟಿ ಲಾನುಭವಿಗಳಿದ್ದಾರೆ. 20,204 ನ್ಯಾಯಬೆಲೆ ಅಂಗಡಿಗಳು ಸೇರಿ ಕನ್‌ಜ್ಯೂಮರ್ಸ್‌ ಕ್ರೆಡಿಟ್ ಸೊಸೈಟಿಗಳು (ಸಿಸಿಎಸ್), ಪ್ರತಿ ತಿಂಗಳು 4.34 ಲಕ್ಷ ಮೆಟ್ರಿಕ್ ಟನ್ ಆಹಾರ ಪದಾರ್ಥವನ್ನು ಫಲಾನುಭವಿಗಳಿಗೆ ವಿತರಿಸುತ್ತಿವೆ. ಕೇಂದ್ರ ಮತ್ತು ರಾಜ್ಯದ ಯೋಜನೆಗಳಿಂದ ತಲಾ 5 ಕೆಜಿ ಸೇರಿ ಒಟ್ಟು 10 ಕೆಜಿ ಪಡಿತರವನ್ನು ಪ್ರತಿ ತಿಂಗಳು ಬಿಪಿಎಲ್ ಹೊಂದಿರುವ ಪ್ರತಿ ಸದಸ್ಯನಿಗೆ ಉಚಿತವಾಗಿ ನೀಡಲಾಗುತ್ತಿದೆ. ಅಂತ್ಯೋದಯ ಕಾರ್ಡ್‌ಗೆ 20 ಕೆಜಿ ಅಕ್ಕಿ, 15 ಕೆಜಿ ರಾಗಿ ಸೇರಿ ಒಟ್ಟು 35 ಕೆಜಿ ನೀಡಲಾಗುತ್ತಿದೆ.

ನ್ಯಾಯಬೆಲೆ ಅಂಗಡಿಗಳಲ್ಲಿ ಕಾರ್ಡ್‌ದಾರರು, ಬಯೋ ಮೆಟ್ರಿಕ್ ಕೊಟ್ಟು ಆಹಾರ ಧಾನ್ಯ ಪಡೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಕೆಲ ನ್ಯಾಯಬೆಲೆ ಅಂಗಡಿಗಳ ಮಾಲೀಕರು, ಫಲಾನುಭವಿಗಳಿಗೆ ಸಮರ್ಪಕವಾಗಿ ಪಡಿತರ ವಿತರಣೆ ಮಾಡದೆ ಅಕ್ರಮವಾಗಿ ದಾಸ್ತಾನು ಮಾಡಿಕೊಳ್ಳುತ್ತಿರುವ ಬಗ್ಗೆ ದೂರುಗಳಿವೆ.ಇದಕ್ಕೆ ಕಡಿವಾಣ ಹಾಕಲು ಯೋಜನೆಯಡಿ ಅಂಗಡಿಗಳಲ್ಲಿ ಎಲೆಕ್ಟ್ರಾನಿಕ್ ಆಧಾರಿತ ತೂಕದ ಯಂತ್ರಗಳು, ಪಾಯಿಂಟ್ ಆಫ್​​ ಸೇಲ್ ಸಾಧನ ಅಳವಡಿಸಲು ಮುಖ್ಯ ಉದ್ದೇಶವಾಗಿದೆ. ಈ ಕ್ರಮದಿಂದ ಪಿಡಿಎಸ್ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ತಂತ್ರಜ್ಞಾನ ಆಧಾರಿತ ಸೇವೆಗೆ ಅನುಕೂಲವಾಗಲಿದೆ.

ನ್ಯಾಯಬೆಲೆ ಅಂಗಡಿ ಮಾಲೀಕರು ಪ್ರತಿ ತಿಂಗಳು ಆಹಾರಧಾನ್ಯ ವಿತರಣೆ ವೇಳೆ ಕಡ್ಡಾಯವಾಗಿ ಕಾರ್ಡ್‌ದಾರರಿಗೆ ಮುದ್ರಿತ ರಸೀದಿ ನೀಡುವಂತೆ ಆದೇಶಿಸಿದೆ. ರಸೀದಿಯಲ್ಲಿ ಫಲಾನುಭವಿಯ ಹೆಸರು, ಅಕ್ಕಿ ವಿತರಣೆ, ನ್ಯಾಯಬೆಲೆ ಅಂಗಡಿ ಮತ್ತು ಯೋಜನೆ ಹೆಸರು ಎಂಬಿತ್ಯಾದಿ ಮಾಹಿತಿ ಇರಲಿವೆ. ಕಾರ್ಡ್‌ದಾರರಿಗೆ ವಿತರಿಸುವ ಆಹಾರ ಪದಾರ್ಥಗಳು ಬಗ್ಗೆ ಇಂಚಿಂಚೂ ಮಾಹಿತಿಯೂ ಲಭ್ಯವಾಗುತ್ತದೆ. ಇದೀಗ, ‘ಸ್ಮಾರ್ಟ್ ಪಿಡಿಎಸ್’ ಯೋಜನೆ ಜಾರಿಯಿಂದ ಪಿಡಿಎಸ್ ವ್ಯವಸ್ಥೆ ಸುಧಾರಣೆಗೆ ಇನ್ನಷ್ಟು ಸಹಕಾರಿಯಾಗಲಿದೆ.

‘ಮೇರಾ ರೇಷನ್’ ಆ್ಯಪ್: ಕಾರ್ಡ್‌ದಾರರಿಗೆ ರೇಷನ್ ವಿತರಣೆಯಲ್ಲಿ ಪಾರದರ್ಶಕತೆ ತರಲು ಆಹಾರ ಇಲಾಖೆ ಈಗಾಗಲೇ ‘ಮೇರಾ ರೇಷನ್’ ಆ್ಯಪ್‌ನಲ್ಲಿ ಹಲವು ವ್ಯವಸ್ಥೆ ಕಲ್ಪಿಸಿದೆ. ಕಾರ್ಡ್‌ದಾರರು ತಮ್ಮ ಮೊಬೈಲ್‌ನಲ್ಲಿ ಈ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಕಾರ್ಡ್‌ನ ಸಂಖ್ಯೆ ನಮೂದಿಸಿದರೆ ಆರು ತಿಂಗಳಲ್ಲಿ ಎಷ್ಟು ರೇಷನ್ ವಿತರಿಸಿರುವುದು, ಎಷ್ಟು ಪ್ರಮಾಣದ ರೇಷನ್ ಕೊಟ್ಟಿರುವುದು, ಮಾಲೀಕರು ಕಾರ್ಡ್‌ದಾರರಿಗೆ ಎಷ್ಟು ಹಂಚಿಕೆ ಮಾಡಿರುವುದು, ಹತ್ತಿರದ ರೇಷನ್ ಅಂಗಡಿ ಇರುವುದು ಮತ್ತು ಪೋರ್ಟಬಿಲಿಟಿಯಡಿ ಹೊರ ರಾಜ್ಯದವರು ಎಷ್ಟು ರೇಷನ್ ಪಡೆದಿರುವುದು ಸೇರಿ ಇತರ ಮಾಹಿತಿಗಳು ಸಿಗಲಿವೆ. ಜತೆಗೆ, ಆ್ಯಪ್‌ನಲ್ಲಿ ಕಾರ್ಡ್ ಸಂಖ್ಯೆ ನೋಂದಣಿ ಮಾಡಿಕೊಳ್ಳಬಹುದು.