ಜಿಲ್ಲೆ

90ನೇ ಜನ್ಮದಿನಾಚರಣೆಯಂದು ತಮ್ಮ ಜನ್ಮದಿನಾಂಕದ ಕುರಿತು ಸ್ಪಷ್ಟಮಾಹಿತಿ ಕೊಟ್ಟ ಡಾ.ಎಸ್​.ಎಲ್​.ಭೈರಪ್ಪ

ಬೆಂಗಳೂರು: ಸರಸ್ವತಿ ಸಮ್ಮಾನ್​ ಪುರಸ್ಕೃತ ಸಾಹಿತಿ ಡಾ.ಎಸ್​.ಎಲ್. ಭೈರಪ್ಪ ಅವರು ತಮ್ಮ 90ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ವಿಜಯವಾಣಿ-ದಿಗ್ವಿಜಯ ನ್ಯೂಸ್​ ಕ್ಲಬ್​ಹೌಸ್​ನಲ್ಲಿ ಸಂವಾದ ನಡೆಸುತ್ತಿದ್ದು, ಇದೇ ಸಂದರ್ಭದಲ್ಲಿ ತಮ್ಮ ಜನ್ಮದಿನಾಂಕದ ಕುರಿತು ಸ್ಪಷ್ಟನೆಯನ್ನೂ ನೀಡಿದ್ದಾರೆ.

ಸಂವಾದದಲ್ಲಿ ಸಾಹಿತಿ ಪ್ರಧಾನ್ ಗುರುದತ್ತ ಅವರು, ನಿಮಗೆ ನಿಮ್ಮ ಜನ್ಮದಿನಾಂಕ ಗೊತ್ತಿಲ್ಲ ಎಂಬುದನ್ನು ಕೇಳಿದ್ದೇನೆ, ಆ ಬಗ್ಗೆ ಏನು ಹೇಳುತ್ತೀರಿ? ಎಂಬ ಪ್ರಶ್ನೆಯನ್ನು ಇರಿಸಿದರು. ಅದಕ್ಕೆ ಪ್ರತಿಕ್ರಿಯಿಸಿ ಭೈರಪ್ಪ ಅವರು ತಮ್ಮ ನೆನಪಿನ ಸರಣಿಯನ್ನು ಬಿಚ್ಚಿಟ್ಟು ಜನ್ಮದಿನಾಂಕದ ಕುರಿತು ಸ್ಪಷ್ಟತೆ ಒದಗಿಸದರು.

ನಾನು ಚಿಕ್ಕವನಿದ್ದಾಗ ಜಾತಕ ಕಳೆದುಹೋಗಿದ್ದು, ಜನ್ಮದಿನಾಂಕ ಯಾವುದು ಎನ್ನುವುದು ನನಗೆ ಗೊತ್ತಿರಲಿಲ್ಲ. ಆದರೆ ನನ್ನ ಪ್ರಾಥಮಿಕ ಶಾಲಾ ದಾಖಲಾತಿಯಲ್ಲಿ 1931ರ ಆಗಸ್ಟ್ 20 ಎಂದು ನಮೂದಾಗಿತ್ತು. ಇನ್ನು ಆ ಸಂದರ್ಭದಲ್ಲಿ ಕೆಲಸ ಇತ್ಯಾದಿಗೆ ಸೇರಲು ಬೇಗ ಅನುಕೂಲವಾಗಲಿ ಎಂದು ಬೇಗ ಹುಟ್ಟಿದ ಥರ ಜನ್ಮದಿನಾಂಕ ಕೊಡುವುದಿತ್ತಾದ್ದರಿಂದ ನನಗೆ ಅದರ ಬಗ್ಗೆ ಸ್ವಲ್ಪ ಅನುಮಾನವಿತ್ತು. ನಂತರ ಗುಜರಾತಲ್ಲಿ ಒಬ್ಬರು ಹಸ್ತಸಾಮುದ್ರಿಕದವರು ನನ್ನ ಕೈ ನೋಡಿ, ಜುಲೈ 26ರಂದು ಹುಟ್ಟಿದ್ದೆ ಎಂದಿದ್ದರು ಎಂಬುದನ್ನು ತಿಳಿಸಿದ ಭೈರಪ್ಪ ಅವರು ತಮ್ಮ ನೆನಪನ್ನು ಬಾಲ್ಯದ ಗೆಳೆಯ ರಾಜನತ್ತ ಹೊರಳಿಸಿದರು.

ನನ್ನ ಗೆಳೆಯ ರಾಜ ಅಂತಿದ್ದ, ಅವನು ನನಗಿಂತ ಹದಿನೈದು ದಿನ ಮೊದಲು ಹುಟ್ಟಿದ್ದ. ಅವನು ಅಮಾವಾಸ್ಯೆಗೆ ಹುಟ್ಟಿದ್ದ, ನಾನು ನಂತರದ ಹುಣ್ಣಿಮೆಯಂದು ಹುಟ್ಟಿದ್ದೆ. ಆತನ ಮನೆಯಲ್ಲಿ ಅವನ ಜಾತಕವೆಲ್ಲ ಇತ್ತಾದ್ದರಿಂದ ಅದರ ಪ್ರಕಾರ ನೋಡಿದಾಗ ಮತ್ತು ಸರ್ಕಾರಿ ದಾಖಲೆಗಳನ್ನು ತಾಳೆ ಮಾಡಿ ನೋಡಿದಾಗ 1931ರ ಆಗಸ್ಟ್​ 20ರಂದೇ ಹುಟ್ಟಿದ್ದು ಎಂಬುದು ಖಚಿತವಾಗಿತ್ತು. ಇದು ಇಂಗ್ಲಿಷ್​ ಕ್ಯಾಲೆಂಡರ್​ ಪ್ರಕಾರ, ಹಿಂದೂ ಪದ್ಧತಿ ಪ್ರಕಾರ ನಾನು ವ್ಯಾಸ ಪೂರ್ಣಿಮೆಯಂದು ಹುಟ್ಟಿದ್ದು ಎಂಬ ವಿಷಯವನ್ನು ಭೈರಪ್ಪ ಅವರು ವಿವರಿಸಿದರು.

ಡಾ.ಎಸ್​.ಎಲ್​. ಭೈರಪ್ಪ ಅವರೊಂದಿಗೆ ಸಂವಾದಕ್ಕೆ ಸೇರಿಕೊಳ್ಳಲು ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ..