ಬೆಂಗಳೂರು: ಬಿಡಿಎ ಬಹುಕೋಟಿ ನಿವೇಶನಗಳ ಅಕ್ರಮ ಭಾರೆ ಪ್ರಕರಣದ ಸಂಬಂಧ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಧೀಕ್ಷಕಿ ಸೇರಿದಂತೆ 6 ಮಂದಿಯನ್ನು ಶೇಷಾದ್ರಿಪುರ ಪೊಲೀಸರು ಬಂಧಿಸಿದ್ದಾರೆ.
ಬಿಡಿಎ ಅಧೀಕ್ಷಕಿ ಎಚ್.ಡಿ. ಕಮಲಮ್ಮ, ನಿವೃತ್ತ ನೌಕರರಾದ ಮಂಜುಳಾ ಬಾಯಿ, ಏಜೆಂಟ್‌ಗಳಾದ ಎಚ್‌ಬಿಆರ್ ಲೇಔಟ್‌ನ ಕೃಷ್ಣೋಜಿರಾವ್, ಮೈಸೂರಿನ ಪ್ರಕಾಶ್, ರಾಜಾಜಿನಗರದ ಗೌಸ್ ಖಾನ್, ಸೈಯದ್ ಮೋಸುದ್ದೀನ್ ಬಂಧಿತರು. ಕೆಲ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಕೆಲವು ಬಿಡಿಎ ಸಿಬ್ಬಂದಿ ಮತ್ತು ಮಧ್ಯವರ್ತಿಗಳ ಪತ್ತೆಗೆ ಇನ್‌ಸ್ಪೆಕ್ಟರ್ ಎಂ.ಎಸ್. ರವಿ ನೇತೃತ್ವದ ತಂಡ ಬಲೆಬೀಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಂಗೇರಿಯ ವಿಶ್ವೇಶ್ವರಯ್ಯ ಲೇಔಟ್, ಬಾಣಸವಾಡಿಯ ಎಚ್‌ಬಿಆರ್ ಬಡಾವಣೆಗಳಲ್ಲಿ ಕೋಟ್ಯಂತರ ಮೌಲ್ಯದ 14 ನಿವೇಶನಗಳನ್ನು ಅಕ್ರಮವಾಗಿ ಮಾರಾಟ ಮಾಡಿದ್ದರು. ಬಿಡಿಎನಲ್ಲಿ ಅಧೀಕ್ಷಕಿ ಕಮಲಮ್ಮಗೆ ಹಲವು ವರ್ಷಗಳಿಂದ ಅದೇ ವಿಭಾಗದ ಕೇಸ್ ವರ್ಕರ್ ಆಗಿ ನಿವೃತ್ತರಾಗಿದ್ದ ಮಂಜುಳಾ ಬಾಯಿ ಮತ್ತು ರಿಯಲ್ ಎಸ್ಟೇಟ್ ಏಜೆಂಟ್‌ಗಳ ಜತೆ ಆತ್ಮೀಯತೆ ಇತ್ತು. ಸ್ನೇಹದಲ್ಲೇ ಹಣದಾಸೆಗೆ ಮಧ್ಯವರ್ತಿಗಳ ಜತೆ ಸೇರಿ ಬಿಡಿಎಗೆ ವಂಚಿಸಿದ್ದಾರೆ.
ಬಿಡಿಎ ಅಭಿವೃದ್ಧಿಪಡಿಸಿದ್ದ ವಿಶ್ವೇಶ್ವರಯ್ಯ ಲೇಔಟ್ ಮತ್ತು ಎಚ್‌ಬಿಆರ್ ಬಡಾವಣೆಗಳಲ್ಲಿ 14 ಸೈಟ್‌ಗಳನ್ನು ಜನರಿಗೆ ಮಂಜೂರಾಗಿವೆ ಎಂದು ನಕಲಿ ದಾಖಲೆಗಳನ್ನು ಆರೋಪಿಗಳು ಸೃಷ್ಟಿಸಿದ್ದರು. ಬಳಿಕ ಈ ದಾಖಲೆಗಳನ್ನು ಬಳಸಿಕೊಂಡು ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆ ದರದಲ್ಲಿ ಮಾರಾಟ ಮಾಡಿ ಹಣ ಸಂಪಾದಿಸಿದ್ದರು.
ಈ ಎರಡು ಲೇಔಟ್‌ಗಳಲ್ಲಿ ತಲಾ 30*40 ನಿವೇಶನಕ್ಕೆ 70 ರಿಂದ 80 ಲಕ್ಷ ರೂ. ಹಾಗೂ 60*40 ನಿವೇಶನಕ್ಕೆ 1.5 ರಿಂದ 1.8 ಕೋಟಿ ರೂ. ವರೆಗೆ ಅಕ್ರಮವಾಗಿ ಪರಭಾರೆ ಮಾಡಿದ್ದರು. 2015-18ರ ಅವಧಿಯಲ್ಲಿ ನಡೆದಿರುವ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.
ಭೂ ಹಗರಣ ಬೆಳಕಿಗೆ ಬಂದ ನಂತರ ನಗರ ತೊರೆದ ಕಮಲಮ್ಮ, ಮೊಬೈಲ್ಫೋನ್ ಸ್ವಿಚ್ಡ್ ಆಫ್ ಮಾಡಿಕೊಂಡು ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನಲ್ಲಿನ ಹುಟ್ಟೂರಿನಲ್ಲಿ ಅಡಗಿದ್ದರು. ಸೇವೆಯಿಂದ ನಿವೃತ್ತರಾಗಿದ್ದ ಮಂಜುಳಾ ಬಾಯಿ ತಪ್ಪಿಸಿಕೊಂಡಿದ್ದರು. ಮೊಬೈಲ್ ಫೋನ್ ಕರೆಗಳ ಮಾಹಿತಿ ಆಧರಿಸಿ ಪತ್ತೆ ಮಾಡಿ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.