ಸುಬ್ರಹ್ಮಣ್ಯ: ಯೇನೆಕಲ್ಲು ಗ್ರಾಮದ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಉಳ್ಳಾಕುಲು, ಉಳ್ಳಾಳ್ತಿ ಬಚ್ಚನಾಯಕ ದೇವಸ್ಥಾನದ ಎದುರು ಸೇತುವೆ ಮತ್ತು ಅಣೆಕಟ್ಟು ನಿರ್ಮಾಣಕ್ಕೆ ಉಪಮುಖ್ಯಮಂತ್ರಿ ಅಸ್ತು ಎಂದಿದ್ದಾರೆ. ಇಲ್ಲಿ ಹರಿಯುವ ನದಿಗೆ ಅಣೆಕಟ್ಟು ನಿರ್ಮಿಸಿದರೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ತಾಪಂ ನಿಕಟಪೂರ್ವ ಸದಸ್ಯ ಅಶೋಕ್ ನೆಕ್ರಾಜೆ ಡಿಸಿಎಂಗೆ ಮನವಿ ಸಲ್ಲಿಸಿದ್ದರು. ಇದೀಗ ಮನವಿಗೆ ಸ್ಪಂದಿಸಿದ ಉಪಮುಖ್ಯಮಂತ್ರಿ ಅಣೆಕಟ್ಟು ನಿರ್ಮಾಣಕ್ಕೆ ಯೋಜನೆ ರೂಪಿಸಲು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಸರ್ವೇ ಕಾರ್ಯ ಮಾಡಿ ವರದಿ ಸಲ್ಲಿಸುವಂತೆ ಸೂಚಿಸಿದ್ದರು. ಡಿಸಿಎಂ ಆದೇಶದ ಪ್ರಕಾರ ವರಾಹಿ ನೀರಾವರಿ ನಿಗಮದ ಸಿದ್ದಾಪುರ ಮತ್ತು ಉಡುಪಿ ಘಟಕದ ಇಂಜಿನಿಯರ್‌ಗಳು ಭಾನುವಾರ ಸ್ಥಳ ಪರಿಶೀಲಿಸಿ ಸರ್ವೇ ಕಾರ್ಯ ನಡೆಸಿದರು. ಅಲ್ಲದೆ ಕಾಮಗಾರಿಯ ನೀಲಿನಕಾಶೆ ಮತ್ತು ಅಂದಾಜುಪಟ್ಟಿ ತಯಾರಿಸಿದರು.