ಜಿಲ್ಲೆ

ಖುಲಾಸೆಗೊಂಡವರಿಗೆ ಎಸ್‌ಐಟಿ ನೋಟಿಸ್ : ಉದಯ್ ಜೈನ್ ವಿಚಾರಣೆಗೆ ಹಾಜರು ಸೌಜನ್ಯಾ ಪ್ರಕರಣ

ಸೌಮ್ಯ ಆರ್

ಮಂಗಳೂರು: ಸೌಜನ್ಯ ಹತ್ಯೆ ಪ್ರಕರಣದಲ್ಲಿ ಆರೋಪ ಹೊತ್ತು ಖುಲಾಸೆಗೊಂಡಿದ್ದ ಉದಯ್ ಜೈನ್, ಧೀರಜ್ ಕೆಲ್ಲಾ ಹಾಗೂ ಮಲ್ಲಿಕ್ ಜೈನ್‌ಗೆ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಉದಯ್ ಜೈನ್ ಬುಧವಾರ ಬೆಳಗ್ಗೆ ಎಸ್‌ಐಟಿ ಕಚೇರಿಗೆ ಆಗಮಿಸಿದ್ದು, ಸಂಜೆವರೆಗೂ ಕಚೇರಿಯಲ್ಲಿ ತನಿಖಾಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ಸೌಜನ್ಯ ಕೊಲೆ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಈ ಮೂವರ ವಿರುದ್ಧ ಆರೋಪ ಹೊರಿಸಲಾಗಿತ್ತು. ಈ ಮೂವರು ಸೌಜನ್ಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದಾಗಿ ಸೌಜನ್ಯ ಕುಟುಂಬ ಆರೋಪಿಸಿತ್ತು. ಇದರ ಬಗ್ಗೆ ಸಿಐಡಿ ತನಿಖೆ ನಡೆದು, ಬಳಿಕ ಸಿಬಿಐ ತನಿಖೆಯಲ್ಲೂ ಈ ಮೂವರ ವಿರುದ್ಧ ಆರೋಪ ಸಾಬೀತಾಗಿಲ್ಲ. ಈ ಮೂವರೂ ಬ್ರೈನ್ ಮ್ಯಾಪಿಂಗ್‌ಗೆ ಒಳಗಾಗಿದ್ದರು.

ಇದೀಗ ಸೌಜನ್ಯ ಕೇಸ್ ಬಗ್ಗೆ ಎಸ್‌ಐಟಿಗೆ ಪ್ರತ್ಯಕ್ಷದರ್ಶಿ ಎಂದು ಹೇಳುತ್ತಿರುವ ಮಂಡ್ಯದ ಮಹಿಳೆಯೊಬ್ಬರು ದೂರು ನೀಡಿದ್ದರು. ಅಲ್ಲದೆ ಬುರುಡೆ ಕೇಸಿನ ಆರೋಪಿ ಚಿನ್ನಯ್ಯ ಕೂಡ ಈ ಹಿಂದೆ ಸೌಜನ್ಯ ಕೇಸಿನಲ್ಲಿ ಆಕೆಯ ಶವ ವಿಲೇವಾರಿ ಮಾಡಿದ ಬಗ್ಗೆ ನನಗೆ ಗೊತ್ತಿದೆ ಎಂದು ಹೇಳಿಕೊಂಡಿದ್ದ. ಸೌಜನ್ಯ ಪರ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಗಿರೀಶ್ ಮಟ್ಟಣ್ಣನವರ್ ಕೂಡ ಅನಾಥ ಶವಗಳ ಹೂತ ಬಗ್ಗೆ ಪಂಚಾಯಿತಿ ದಾಖಲೆಗಳು ಸರಿಯಿಲ್ಲ, ಸೌಜನ್ಯ ಕೇಸಿನ ಮರುತನಿಖೆ ನಡೆಸುವಂತೆ ಕೋರಿ ಎಸ್‌ಐಟಿ ಕಚೇರಿಗೆ ದೂರು ನೀಡಿದ್ದರು. ಸೌಜನ್ಯ ತಾಯಿ ಕುಸುಮಾವತಿ ಇತ್ತೀಚೆಗೆ ಎಸ್‌ಐಟಿ ಕಚೇರಿಗೆ ತೆರಳಿ ಚಿನ್ನಯ್ಯನ ತನಿಖೆ ನಡೆಸುವಂತೆ ಕೋರಿ ದೂರು ನೀಡಿದ್ದರು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಮಂಗಳವಾರ ಈ ಮೂರು ಮಂದಿಗೆ ನೋಟಿಸ್ ನೀಡಿ, ಬುಧವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.

ಯಾವುದೇ ತನಿಖೆಗೆ ಸಿದ್ಧ

ಯಾವುದೇ ರೀತಿಯ ತನಿಖೆಗೆ ನಾವು ಸಿದ್ಧರಿದ್ದೇವೆ, ಸೌಜನ್ಯ ತಾಯಿ ಎಸ್‌ಐಟಿಗೆ ಕೊಟ್ಟ ದೂರಿಗೆ ವಿಚಾರಣೆಗೆ ಕರೆದಿರಬಹುದು. ಚಿನ್ನಯ್ಯ ನೀಡಿದ ಹೇಳಿಕೆಯ ಕಾರಣಕ್ಕೂ ಕರೆದಿರಬಹುದು, ಬುರುಡೆ ಪ್ರಕರಣದ ದಿಕ್ಕು ಬದಲಿಸುವ ಹುನ್ನಾರ ಇದು ಎಂದು ಉದಯ ಜೈನ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.

ಮಂಗಳವಾರ ರಾತ್ರಿ ಎಸ್‌ಐಟಿ ಕರೆ ಮಾಡಿ ಬುಧವಾರ ಬರುವಂತೆ ಹೇಳಿದರು. ನಾನು ಯಾವುದೇ ವಿಚಾರಣೆಗೆ ಸಿದ್ಧನಿದ್ದೇನೆ. ಇನ್ನೊಮ್ಮೆ ನನ್ನ ಬ್ರೈನ್ ಮ್ಯಾಪಿಂಗ್ ಮಾಡಿದರೂ ಸಿದ್ಧನಿದ್ದೇನೆ. ಆವತ್ತು ಸಿಐಡಿ, ಸಿಬಿಐ ಎಲ್ಲವೂ ನಮ್ಮನ್ನು ಆರೋಪಮುಕ್ತ ಮಾಡಿದೆ. ಸಿಬಿಐ ಕೋರ್ಟ್ ಎದುರು ನಾವೇ ಬ್ರೈನ್ ಮ್ಯಾಪಿಂಗ್ ನಡೆಸುವಂತೆ ಹೇಳಿದ್ದೆವು. ಕೋರ್ಟ್ ಅನುಮತಿ ಕೊಟ್ಟ ಬಳಿಕ ಬ್ರೈನ್ ಮ್ಯಾಪಿಂಗ್ ಆಗಿದೆ. ಚೆನ್ನೈ ಸಿಬಿಐ ಕಚೇರಿಯಲ್ಲಿ ವಿಚಾರಣೆ ನಡೆದು ಬೆಂಗಳೂರಿನಲ್ಲಿ ಬ್ರೈನ್ ಮ್ಯಾಪಿಂಗ್ ನಡೆಸಲಾಗಿದೆ. ಎಲ್ಲದರಲ್ಲೂ ನಮ್ಮ ಯಾವುದೇ ತಪ್ಪಿಲ್ಲ ಎಂದು ಬಂದಿದೆ. ಮುಂದೆಯೂ ಯಾವುದೇ ವಿಚಾರಣೆಗೆ ನಾವು ಸಿದ್ಧರಿದ್ದೇವೆ ಎಂದಿದ್ದಾರೆ.