ಶಿರಸಿ: ಅಂಗನವಾಡಿ ಪುಟಾಣಿಗಳಿಗಾಗಿ ಬಾವಿ ತೋಡುತ್ತಿರುವ ಜಲಸಾಧಕಿ ಗೌರಿ ನಾಯ್ಕ ಅವರಿಗೆ ಕೆಲಸವನ್ನು ಸ್ಥಗಿತಗೊಳಿಸುವಂತೆ ಮಹಿಳಾ ಮತ್ತು ಮಕ್ಕಳ ಸೂಚಿಸಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. ಸೋಮವಾರ ಅಂಗನವಾಡಿ ಆವರಣಕ್ಕೆ ಆಗಮಿಸಿದ ನೂರಕ್ಕೂ ಅಧಿಕ ಸ್ಥಳೀಯರು ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಆಕ್ರೋಷ ವ್ಯಕ್ತಪಡಿಸಿದರಲ್ಲದೇ ತಾವೇ ಮುಂದೆ ನಿಂತು ಬಾವಿ ತೆಗೆಯುವ ಕೆಲಸಕ್ಕೆ ಭದ್ರತೆ ಒದಗಿಸಿದರು.
15 ಮಕ್ಕಳಿರುವ ಗಣೇಶನಗರ -6 ಅಂಗನವಾಡಿಗೆ ಗೌರಿ ನಾಯ್ಕ ಕಳೆದ 13 ದಿನಗಳಿಂದ ಒಬ್ಬಂಟಿಯಾಗಿ ಬಾವಿ ತೋಡುವ ಕಾರ್ಯ ನಡೆಸಿದ್ದರು. ಅಂಗನವಾಡಿಗೆ ಸಮರ್ಪಕ ನೀರು ಸೌಲಭ್ಯ ಇರದ ಕಾರಣ ದೂರದ ಮನೆಗಳಿಂದ ಕೊಡದಲ್ಲಿ ನೀರನ್ನು ಹೊತ್ತು ಅಂಗನವಾಡಿಗೆ ತಂದು ಪುಟಾಣಿಗಳಿಗೆ ಅಡುಗೆ ಸಿದ್ಧಪಡಿಸಲಾಗುತ್ತಿತ್ತು. ಇದನ್ನು ಗಮನಿಸಿದ್ದ ಗೌರಿ, ಸ್ಥಳೀಯರು ಮತ್ತು ಗ್ರಾಮ ಪಂಚಾಯಿತಿಗೆ ತಿಳಿಸಿಕೊಂಡು ಯಾವ ಪ್ರತಿಫಲಾಪೇಕ್ಷೆ ಇರದೇ ಅಂಗನವಾಡಿ ಹಿಂಭಾಗದಲ್ಲಿ ಬಾವಿ ತೋಡುವ ಕೆಲಸ ನಡೆಸಿದ್ದರು. ಆದರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಭಾರಿ ಸಿಡಿಪಿಒ ವೀಣಾ ಶಿರ್ಸಿಕರ್ ಹಾಗೂ ಮೇಲ್ವಿಚಾರಕಿ ಅನಿತಾ ಶನಿವಾರ ಆಗಮಿಸಿ,"ಇಲಾಖೆಯ ಅನುಮತಿ ಪಡೆಯದೇ ಅಂಗನವಾಡಿ ಆವರಣದಲ್ಲಿ ಬಾವಿ ತೋಡುತ್ತಿದ್ದೀರಿ. ನಮಗೆ ಇಲಾಖೆಯ ಉಪನಿರ್ದೇಶಕಿ ಡಾ. ಹುಲಿಗೆಮ್ಮ ಅವರಿಂದ ಸೂಚನೆ ಬಂದಿದೆ. ತಕ್ಷಣವೇ ಬಾವಿ ಮುಚ್ಚದಿದ್ದರೆ ಉನ್ನತ ಅಧಿಕಾರಿಗಳಿಗೆ ವರದಿ ಸಲ್ಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು.
ಗೌರಿ ನಾಯ್ಕ ಅವರ ಶ್ರಮ ಮತ್ತು ಕಾಳಜಿ ಅರಿಯದೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಈ ಉದ್ದಟತನ ಸ್ಥಳೀಯರ ಆಕ್ರೋಷಕ್ಕೆ ಕಾರಣವಾಗಿದೆ. ಅಂಗನವಾಡಿ ಆವರಣಕ್ಕೆ ಆಗಮಿಸಿದ ಸ್ಥಳೀಯ ನೂರಾರು ಜನರು, "ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕು ಎಂದು ಪಟ್ಟು ಹಿಡಿದರು.
ಇದನ್ನೂ ಓದಿ: ಭವಿಷ್ಯ ರೂಪಿಸುವ ಪತ್ರಿಕೆಗಳಿಗೆ ಭವಿಷ್ಯ
ಬಾವಿ ತೋಡುತ್ತಿರುವ ಜಾಗಕ್ಕೆ ಯಾರೂ ಆಗಮಿಸದಂತೆ ಸುರಕ್ಷತೆಯನ್ನು ನಾವು ಈಗಾಗಲೇ ಮಾಡಿರುವುದು ಅವರಿಗೆ ಗಮನಕ್ಕಿಲ್ಲವೇ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಹುತ್ಗಾರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ನಾಯ್ಕ ಮಾತನಾಡಿ, "ಅಂಗನವಾಡಿಗೆ ನೀರಿಲ್ಲದ್ದನ್ನು ಗಮನಿಸಿದ ಗೌರಿ, ಬಾವಿ ತೋಡುವ ಇಂಗಿತವನ್ನು ನಮ್ಮಲ್ಲಿ ಹೇಳಿಕೊಂಡಿದ್ದರು. ಗ್ರಾಮ ಪಂಚಾಯಿತಿಯಲ್ಲಿ ನಾವು ಚರ್ಚಿಸಿ, ಪಿಡಿಒ ಅರೊಂದಿಗೆ ಅಂಗನವಾಡಿ ಪರಿಶೀಲಿಸಿದ ಬಳಿಕವೇ ನಾವು ಬಾವಿ ತೋಡಲು ಒಪ್ಪಿಗೆ ಸೂಚಿಸಿದ್ದೇವೆ. ಸುರಕ್ಷತೆ ಬೇಲಿ ನಿರ್ಮಿಸಿಕೊಂಡೇ ಬಾವಿ ಕೆಲಸ ಆರಂಭಿಸಿದ್ದಾರೆ. ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ತೊಂದರೆ ನೀಡಲಾರಂಭಿಸಿದಾಗ ನಾವೇ ಅವರೊಂದಿಗೆ ಮಾತನಾಡಿ ಅವಘಡ ನಡೆಯದಂತೆ ಗ್ರಾಮ ಪಂಚಾಯಿತಿಯಿಂದಲೇ ಕಾಳಜಿ ವಹಿಸುತ್ತೇವೆ ಎಂಬ ಭರವಸೆ ನೀಡಿದ್ದೇವೆ. ಆದಾಗ್ಯೂ ಇಲಾಖೆ ತನ್ನ ಹಠಮಾರಿ ಧೋರಣೆ ಮುಂದುವರಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಣ್ಣೀರಿಟ್ಟ ಅಂಗನವಾಡಿ ಶಿಕ್ಷಕಿ
ಅಂಗನವಾಡಿ ಆವರಣದಲ್ಲಿ ಬಾವಿ ತೋಡುತ್ತಿರುವುದಕ್ಕಾಗಿ ನನಗೆ ಕೆಲ ದಿನಗಳಿಂದ ಬೆದರಿಕೆಯ ಕರೆಗಳು ಬರುತ್ತಿವೆ. ಅಂಗನವಾಡಿ ಶಿಕ್ಷಕ ಹುದ್ದೆಯಿಂದ ನಿನ್ನನ್ನು ತೆಗೆದುಹಾಕುತ್ತೇನೆ ಎಂದೂ ಕೆಲವರು ಬೆದರಿಸುತ್ತಿದ್ದಾರೆ ಎಂದು ಶಿಕ್ಷಕಿ ಜ್ಯೋತಿ ನಾಯ್ಕ ಕಣ್ಣಿರಿಟ್ಟರು. "ಬೆದರಿಕೆ ಒಡ್ಡಿದವರು ಯಾರು? ಅವರ ಫೋನ್ ನಂಬರ್ ಕೊಡಿ" ಎಂದು ಸ್ಥಳೀಯರು ಆಗ್ರಹಿಸಿ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳೀಯರ ಒತ್ತಾಯದ ಮೇಲೆ ಸ್ಥಳಕ್ಕಾಗಮಿಸಿದ ಮೇಲ್ವಿಚಾರಕಿ ಅನಿತಾ ಅವರಲ್ಲಿ ಸಾರ್ವಜನಿಕರು ಪ್ರಶ್ನೆಗಳ ಸುರಿಮಳೆಗೈದ್ದಾರೆ. ಈ ವೇಳೆ ಸ್ಥಳೀಯರೊಂದಿಗೆ ಮಾತನಾಡಿದ ಅನಿತಾ,"ಅಂಗನವಾಡಿಯಿಂದ ಸ್ವಲ್ಪ ದೂರದಲ್ಲಿ ಬಾವಿ ತೆಗೆದಿದ್ದರೆ ಈ ಸಮಸ್ಯೆ ಉಂಟಾಗುತ್ತಿರಲಿಲ್ಲ. ಅಂಗನವಾಡಿ ಸಮೀಪದಲ್ಲಿಯೇ ಬಾವಿ ತೆಗೆಯುತ್ತಿರುವುದು ಮಕ್ಕಳು ಬಾವಿಗೆ ಬಿದ್ದು ಅವಘಡ ಸಂಭವಿಸಿದರೆ ಎಂಬ ಆತಂಕ ಸೃಷ್ಠಿಸಿದೆ. ಕೆಲಸದಿಂದ ತೆಗೆಯುತ್ತೇವೆ ಎಂದು ನಾವು ಅಂಗನವಾಡಿ ಶಿಕ್ಷಕಿಗೆ ಹೇಳಿಲ್ಲ. ಗೌರವಧನದ ಆಧಾರದಲ್ಲಿ ಕೆಲಸ ಮಾಡುತ್ತಿರುವ ಅವರನ್ನು ಸೇವೆಯಿಂದ ತೆಗೆಯಲು ಸಾಧ್ಯವಿಲ್ಲ. ಇಲಾಖೆಯಿಂದ ಬೆದರಿಕೆ ಕರೆ ಬಂದಿದ್ದರೆ ನಾವು ಬೆದರಿಕೆ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.
ಸ್ಥಳೀಯರ ಸಮ್ಮುಖದಲ್ಲಿ ಮುಂದುವರೆದ ಬಾವಿ ಕೆಲಸ
ಈ ಎಲ್ಲ ಘಟನೆಗಳಿಂದ ಕಂಗಾಲಾಗಿದ್ದ ಗೌರಿ ನಾಯ್ಕ ಅವರಿಗೆ ಸ್ಥಳೀಯರೇ ಧೈರ್ಯ ತುಂಬಿದ್ದಾರೆ. ಸಮಾಜದ ಮತ್ತು ಪುಟಾಣಿಗಳ ಸಲುವಾಗಿ ನೀನು ಬಾವಿ ತೋಡುತ್ತಿದ್ದು, ಈ ಕೆಲಸಕ್ಕೆ ಯಾರೇ ಅಡ್ಡಿ ತಂದರೂ ನಾವು ಎದುರಿಸುತ್ತೇವೆ. ಯಾವುದೇ ಆತಂಕಕ್ಕೆ ಒಳಗಾಗದೇ ಬಾವಿ ತೋಡುವ ಕರ‍್ಯ ಮುಂದುವರಿಸುವಂತೆ ಸ್ಥಳೀಯರಾದ ನಾಗರಾಜ ಮುಕ್ರಿ, ಎಂ.ಸಿ. ಪ್ರಕಾಶ, ವೆಂಕಟೇಶ ನಾಯ್ಕ, ವೀರೇಶ ಬೋವಿವಡ್ಡರ್, ಹನುಮಂತ ಬೋವಿ ವಡ್ಡರ್ ಗೌರಿಗೆ ಧೈರ್ಯ ತುಂಬಿದ್ದಾರೆ. ಅವರೆಲ್ಲರ ಸಮ್ಮುಖದಲ್ಲಿ ಗೌರಿ ನಾಯ್ಕ ಬಾವಿ ತೋಡುವ ಕರ‍್ಯವನ್ನು ಮುಂದುವರಿಸಿದರು.
ಬಾವಿ ತೋಡುತ್ತಿದ್ದ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ಆಗಮಿಸಿ ನಿಮಗೆ ಬಾವಿ ತೋಡಲು ಅನುಮತಿ ನೀಡಿದವರು ಯಾರು ಎಂದು ಪ್ರಶ್ನಿಸಿ ಕೆಲಸ ಸ್ಥಗಿತಗೊಳಿಸುವಂತೆ ಸೂಚಿಸಿದರು. ಈಗ ಬಾವಿ 15 ಅಡಿಗಳಷ್ಟು ಆಳ ತೆಗೆದಾಗಿದೆ. ಬಾವಿ ಕೆಲಸ ಸ್ಥಗಿತಗೊಳಿಸಿ ಎಂದಾಗ ನನಗೆ ಬೇಸರವಾಯಿತು. ದುಡ್ಡಿನ ಆಸೆಗೆ ನಾನು ಈ ಬಾವಿ ತೋಡುತ್ತಿಲ್ಲ. ಈಗ ಬಾವಿ ಮುಚ್ಚಿದರೆ ಹೊಟ್ಟೆಯಲ್ಲಿದ್ದ ಮಗು ಕೊಂದಂತಾಗುತ್ತದೆ. ಬಾವಿ ಕೆಲಸ ಮುಂದುವರಿಸುತ್ತೇನೆ, ಅಧಿಕಾರಿಗಳು ಸಹಕಾರ ನೀಡಬೇಕು. - ಗೌರಿ ನಾಯ್ಕ, ಜಲ ಸಾಧಕಿ.
ಬಾವಿ ತೆಗೆಯಲು ಜನ ಸಿಗದ ಈ ದಿನಗಳಲ್ಲಿ ಸ್ವಯಂಪ್ರೇರಣೆಯಿಂದ ಗೌರಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂತಹ ಒಳ್ಳೆಯ ಕೆಲಸಕ್ಕೆ ಕಲ್ಲು ಹಾಕುವವರ ಹಿಂದಿನ ಉದ್ದೇಶ ಏನೆಂದು ಬಹಿರಂಗಗೊಳ್ಳಬೇಕು. - ಪ್ರಕಾಶ ಆಚಾರಿ, ಗಣೇಶನಗರ ಪ್ರೌಢ ಶಾಲೆ ಅಧ್ಯಕ್ಷರು.
ಅಂಗನವಾಡಿ ಶಿಕ್ಷಕಿಗೆ ಬಂದಿರುವ ಬೆದರಿಕೆ ಕರೆ ಇಲಾಖೆಯ ಅಧಿಕಾರಿಗಳು ಅಥವಾ ಸಿಬ್ಬಂದಿಯದ್ದಲ್ಲ. ಅವರನ್ನು ಸೇವೆಯಿಂದ ತೆಗೆದುಹಾಕುವ ಅಧಿಕಾರ ನಮಗಿಲ್ಲ. - ಅನಿತಾ, ಮೇಲ್ವಿಚಾರಕಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿರಸಿ.
ಬಾವಿ ತೋಡುತ್ತಿರುವ ಉದ್ದೇಶವನ್ನು ಇಲಾಖೆ ಅರಿತುಕೊಳ್ಳದೇ ಅಧಿಕಾರಿಗಳು ಕಾನೂನು ಮಾತನಾಡುವುದು ಸರಿಯಲ್ಲ. ಬಾವಿ ನರ‍್ಮಾಣವಾದಮೇಲೆ ಕಟ್ಟೆ ನರ‍್ಮಾಣ ಮಾಡಿ ಸುರಕ್ಷತಾ ಬೇಲಿ ಹಾಕಲಾಗುತ್ತದೆ ಎಂಬುದು ಅಧಿಕಾರಿಗಳಿಗೆ ತಿಳಿಯದಿರುವುದು ಆಶ್ಚರ್ಯ ಮೂಡಿಸುತ್ತಿದೆ. - ಅನಂತಮೂರ್ತಿ ಹೆಗಡೆ, ಸಾಮಾಜಿಕ ಕಾರ್ಯಕರ್ತ.
.