ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಪಡುಬಿದ್ರಿ ಬಂಟರ ಸಂಘ, ಬಂಟ್ಸ್ ವೆಲ್ಫೇರ್ ಟ್ರಸ್ಟ್ ಹಾಗೂ ಸಿರಿಮುಡಿ ದತ್ತಿನಿಧಿ ಸೋಶಿಯಲ್ ವೆಲ್ಫೇರ್ ಟ್ರಸ್ಟ್ ಸಹಭಾಗಿತ್ವದಲ್ಲಿ ಸದಾನಂದ ಕುಡ್ಡು ಶೆಟ್ಟಿ ಹವಾನಿಯಂತ್ರಿತ ಸ್ವಂತ ಕಟ್ಟಡದಲ್ಲಿ ಸ್ಥಾಪಿಸಿರುವ ಸಿರಿಮುಡಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉದ್ಘಾಟನಾ ಸಮಾರಂಭ ಅ.5ರಂದು ಬೆಳಗ್ಗೆ 10ಕ್ಕೆ ಪಡುಬಿದ್ರಿ ಬಂಟರ ಭವನದಲ್ಲಿ ನಡೆಯಲಿದೆ ಎಂದು ಸಂಘ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು ಹೇಳಿದರು.
ಪಡುಬಿದ್ರಿ ಬಂಟರ ಸಂಘ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ವಿಧವೆಯರಿಗೆ, ವಿಶೇಷ ಚೇತನರಿಗೆ, ಅಶಕ್ತರಿಗೆ, ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಸಹಾಯಧನ ವಿತರಣೆ, ದಾನಿಗಳಿಗೆ ಸನ್ಮಾನ ಮತ್ತು ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವಾರ್ಪಣೆ ಸೇರಿದಂತೆ ಹತ್ತು ಹಲವು ವೈಶಿಷ್ಟೃತೆಗಳನ್ನೊಳಗೊಂಡ ಸಿರಿಮುಡಿ ದತ್ತಿ ನಿಧಿ ವಿತರಣೆಯೂ ನಡೆಯಲಿದೆ ಎಂದು ಪಡುಬಿದ್ರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಹಕಾರ ರತ್ನ ಎಂ.ಎನ್.ರಾಜೇಂದ್ರಕುಮಾರ್ ಉದ್ಘಾಟಿಸುವರು. ಉದ್ಯಮಿ ಸದಾನಂದ ಕೆ. ಶೆಟ್ಟಿ ಸಂಕೀರ್ಣವನ್ನು, ಎಂಆರ್‌ಜಿ.ಗ್ರೂಪ್‌ನ ಆಡಳಿತ ನಿರ್ದೇಶಕ ಕೆ.ಪ್ರಕಾಶ್ ಶೆಟ್ಟಿ ಸಿರಿಮುಡಿ ದತ್ತಿ ನಿಧಿ, ಹೇರಂಭ ಗ್ರೂಪ್ ಆಡಳಿತ ನಿರ್ದೇಶಕ ಕನ್ಯಾನ ಸದಾಶಿವ ಶೆಟ್ಟಿ ಸಿರಿಮುಡಿ ಉಳಿತಾಯ ಖಾತೆ ಪಾಸ್ ಪುಸ್ತಕ ವಿತರಣೆ, ವಿ.ಕೆ.ಗ್ರೂಪ್ ಆಡಳಿತ ನಿರ್ದೇಶಕ ಕೆ.ಎಂ.ಶೆಟ್ಟಿ ನಿರಖು ಠೇವಣಿ ಪತ್ರ ಬಿಡುಗಡೆ ಮಾಡಲಿದ್ದಾರೆ. ಭದ್ರತಾ ಕೊಠಡಿಯನ್ನು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಪುಣೆ ಬಂಟರ ಸಂಘ ಅಧ್ಯಕ್ಷ ಅಜಿತ್ ಹೆಗ್ಡೆ ಸವಲತ್ತುಗಳನ್ನು ವಿತರಿಸುವರು. ಪಡುಬಿದ್ರಿ ಬಂಟರ ಮಾಹಿತಿ ಕೈಪಿಡಿ ಬಿಡುಗಡೆ ಮಾಡಲಾಗುವುದು. ಬಂಟರ ಸಂಘ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪಡುಬಿದ್ರಿ ಬಂಟರ ಸಂಘ ಸಿರಿಮುಡಿ ದತ್ತಿ ನಿಧಿ ಸಂಸ್ಥಾಪಕ ಸಾಂತೂರು ಭಾಸ್ಕರ ಶೆಟ್ಟಿ, ಬಂಟರ ಸಂಘ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಕೋಶಾಧಿಕಾರಿ ರವಿ ಶೆಟ್ಟಿ ಗುಂಡ್ಲಾಡಿ, ಮಹಿಳಾ ವಿಭಾಗ ಅಧ್ಯಕ್ಷೆ ಭಾರತಿ ಶೆಟ್ಟಿ, ಯುವ ವಿಭಾಗ ಅಧ್ಯಕ್ಷ ಸುಜಿತ್ ಶೆಟ್ಟಿ, ಸಾಂಸ್ಕೃತಿಕ ವಿಭಾಗದ ಜಯ ಶೆಟ್ಟಿ, ಶ್ರೀನಾಥ್ ಹೆಗ್ಡೆ, ಕಾರ್ಯಕ್ರಮ ಸಂಘಟನಾ ಸಮಿತಿ ಸಂಚಾಲಕ ಸತೀಶ್ ಶೆಟ್ಟಿ ಗುಡ್ಡೆಚ್ಚಿ ಉಪಸ್ಥಿತರಿದ್ದರು.
ಬಂಟರ ಸಂಘಗಳ ಇತಿಹಾಸದಲ್ಲಿಯೇ ಪ್ರಪ್ರಥಮವೆನಿಸಲಿರುವ ಪಡುಬಿದ್ರಿ ಬಂಟರ ಸಂಘದಿಂದ ಸಾಕಾರಗೊಳ್ಳಲಿರುವ ಬಂಟಾಶ್ರಯ ಕುಟುಂಬ ಸೇವಾಶ್ರಮ ಯೋಜನೆಗೆ ಡಿಸೆಂಬರ್ ತಿಂಗಳಿನಲ್ಲಿ ಚಾಲನೆ ನೀಡಲಾಗುವುದು. ಬಂಟ ಸಮಾಜದ ವಯೋವೃದ್ಧರು ತಮ್ಮ ಬದುಕಿನ ಸಂಜೆಯ ದಿನಗಳನ್ನು ಅತ್ಯಂತ ನೆಮ್ಮದಿ ಹಾಗೂ ಗೌರವಯುತವಾಗಿ ಕಳೆಯಬೇಕು ಎನ್ನುವ ಸದಾಶಯದೊಂದಿಗೆ ಮುಂಬೈ ಬಂಟರ ಸಂಘ ಅಧ್ಯಕ್ಷ ಎಲ್ಲೂರು ಮಲ್ಲೆಟ್ಟು ಪರಾರಿ ಪ್ರವೀಣ್ ಬೋಜ ಶೆಟ್ಟಿ ಆವರು ಎಲ್ಲೂರು ಗ್ರಾಮದಲ್ಲಿ ಖರೀದಿಸಿ ನೀಡಿದ 6 ಎಕರೆ ಜಾಗದಲ್ಲಿ ಈ ಯೋಜನೆ ಅಸ್ತಿತ್ವಕ್ಕೆ ಬರಲಿದೆ. ಯುವ ಬಂಟರ ವಿಭಾಗದಿಂದ ಡಿಸೆಂಬರ್‌ನಲ್ಲಿ ಆರೋಗ್ಯ ಮೇಳ, ಜನವರಿಯಲ್ಲಿ ಬಂಟರ ಸಾಂಸ್ಕೃತಿಕ ಕಲಾವೈಭವ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಬಂಟ್ಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಡಾ.ವೈ.ಎನ್.ಶೆಟ್ಟಿ ಮಾತನಾಡಿ, 1983ರಲ್ಲಿ ಸ್ಥಾಪನೆಯಾಗಿ 42 ವರ್ಷಗಳನ್ನು ಕಂಡಿರುವ ಪಡುಬಿದ್ರಿ ಬಂಟರ ಸಂಘದಲ್ಲಿ ಕೌಶಲಾಭಿವೃದ್ಧಿ ತರಬೇತಿ ಕೇಂದ್ರ ಸ್ಥಾಪನೆ ಯೋಜನೆ ಸೇರಿದಂತೆ ಪರಿಪೂರ್ಣ ಸಂಘವಾಗಿ ರೂಪುಗೊಳ್ಳಲು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದರು.