ಜಿಲ್ಲೆ

ಮುಂದಿನ ಪೀಳಿಗೆಗೆ ಯಕ್ಷಗಾನ ಕೊಂಡೊಯ್ಯುವ ಕಾರ್ಯ : ಡಿ.ಹರ್ಷೇಂದ್ರ ಕುಮಾರ್ ಅನಿಸಿಕೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬದಿಯಡ್ಕ

ಸಿರಿಬಾಗಿಲು ವೆಂಕಪ್ಪಯ್ಯ ಸ್ಮಾರಕ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ, ಶ್ರೀಧರ್ಮಸ್ಥಳ ಮೇಳದ ಯಜಮಾನ ಡಿ.ಹರ್ಷೇಂದ್ರ ಕುಮಾರ್ ಧರ್ಮಸ್ಥಳ ಅವರಿಗೆ ಗೌರವ ಕಾರ್ಯಕ್ರಮ ಸಾಂಸ್ಕೃತಿಕ ಭವನದಲ್ಲಿ ನಡೆಯಿತು.

ಸಿರಿಬಾಗಿಲು ಪ್ರತಿಷ್ಠಾನದ ಚಟುವಟಿಕೆ, ಯಕ್ಷಗಾನ ಕಲೆಯ ಪೋಷಣೆ ಮತ್ತು ಮುಂದಿನ ಪೀಳಿಗೆಗೆ ಯಕ್ಷಗಾನ ಕಲೆಯನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಯಕ್ಷಗಾನ ಅಧ್ಯಯನಕ್ಕೆ ಬೇಕಾಗುವ ಸಮಗ್ರ ದಾಖಲೆಗಳನ್ನು ಸಂಗ್ರಹಿಸಿ ಮುಂದಿನ ಪೀಳಿಗೆ ಹಸ್ತಾಂತರಿಸುವ ಪ್ರತಿಷ್ಠಾನದ ಸಂಕಲ್ಪ ಯಶಸ್ವಿಯಾಗಲಿ. 35 ವರ್ಷ ಧರ್ಮಸ್ಥಳ ಮೇಳದಲ್ಲಿ ಯಕ್ಷಗಾನ ಭಾಗವತಿಕೆ ಮಾಡುತ್ತಿರುವ ರಾಮಕೃಷ್ಣ ಮಯ್ಯ ಸಿರಿಬಾಗಿಲು ಅವರ ಸಾಧನೆ ಮಹತ್ತರವಾದುದು. ಯಕ್ಷಗಾನ ಕ್ಷೇತ್ರದಲ್ಲಿ ಅದ್ಭುತ ಸಾಧನೆ ತೋರುತ್ತಿರುವ ಕೇಂದ್ರ, ಮತ್ತಷ್ಟು ಉನ್ನತಿಯನ್ನು ಸಾಧಿಸುವ ನಿಟ್ಟಿನಲ್ಲಿ ದೇವರು ಅನುಗ್ರಹಿಸಲಿ ಎಂದು ಡಿ.ಹರ್ಷೇಂದ್ರ ಕುಮಾರ್ ಹರಸಿದರು.

ಪ್ರತಿಷ್ಠಾನದ ಸಂಚಾಲಕ ಸಿರಿಬಾಗಿಲು ರಾಮಕೃಷ್ಣ ಮಯ್ಯ ದಂಪತಿ ಡಿ. ಹರ್ಷೇಂದ್ರ ಕುಮಾರ್ ಅವರನ್ನು ಗೌರವಿಸಿದರು.

ಆರು ಮೇಳಗಳ ಯಜಮಾನ ಕಿಶನ್ ಹೆಗ್ಡೆ ಪಳ್ಳಿ ಅಧ್ಯಕ್ಷತೆ ವಹಿಸಿದ್ದರು. ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಜಯದೇವ ಖಂಡಿಗೆ, ಲಕ್ಷ್ಮೀನಾರಾಯಣ ತಂತ್ರಿ ಕಾವು ಮಠ ಮುಖ್ಯಅತಿಥಿಯಾಗಿ ಭಾಗವಹಿಸಿದ್ದರು. ಶ್ರೀಧರ್ಮಸ್ಥಳ ಮೇಳದ ಪ್ರಬಂಧಕ ಗಿರೀಶ್ ಹೆಗ್ಡೆ ಅವರನ್ನು ಅಭಿನಂದಿಸಲಾಯಿತು. ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು ಜಿಲ್ಲಾ ಮುಖ್ಯಸ್ಥ ಮುಕೇಶ್ ಅವರ ನೇತೃತ್ವದಲ್ಲಿ ಡಿ.ಹರ್ಷೇಂದ್ರ ಕುಮಾರ್ ಅವರನ್ನು ಗೌರವಿಸಲಾಯಿತು. ಜಗದೀಶ್ ಕೂಡ್ಲು ನಿರೂಪಿಸಿದರು.