ವಿಲಾಸ ಮೇಲಗಿರಿ ಬೆಂಗಳೂರು : ಉಪ ಚುನಾವಣೆ ಕುರುಕ್ಷೇತ್ರದಲ್ಲಿ ಜೆಡಿಎಸ್ಗೆ ಮರ್ವಘಾತವಾಗಿದೆ. ತನ್ನ ಹಿಡಿತದಲ್ಲಿದ್ದ ಶಿರಾ ಕ್ಷೇತ್ರವನ್ನು ಕಳೆದುಕೊಂಡದ್ದೂ ಅಲ್ಲದೆ, ರಾಜರಾಜೇಶ್ವರಿನಗರದಲ್ಲಿ ಪಕ್ಷದ ಅಭ್ಯರ್ಥಿಯ ಹೀನಾಯ ಸೋಲು ಶಾಕ್ ಕೊಟ್ಟಿದೆ. ಅನುಕಂಪದ ಅಲೆ ನಡುವೆಯೂ ಶಿರಾದಲ್ಲಿ ಜೆಡಿಎಸ್ ಮೂರನೇ ಸ್ಥಾನಕ್ಕೆ ತಳ್ಳಲ್ಪಡುವ ಮೂಲಕ ಹಳೇ ಮೈಸೂರು ಭಾಗದಲ್ಲಿ ಒಂದೊಂದೇ ಕ್ಷೇತ್ರ ಕಳೆದುಕೊಳ್ಳುತ್ತಿರುವುದು ಪಕ್ಷದ ವರಿಷ್ಠರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ.
ಉಪ ಚುನಾವಣೆ ಫಲಿತಾಂಶವನ್ನು ನಮ್ಮ ಪಕ್ಷ ಸಮಚಿತ್ತದಿಂದ ಸ್ವೀಕರಿಸುತ್ತದೆ. ಈ ಹಿನ್ನಡೆಯಿಂದ ಧೃತಿಗೆಡಬೇಕಾದ ಅಗತ್ಯವಿಲ್ಲ. ರಾಜಕೀಯ ಪಕ್ಷಗಳಿಗೆ ಉಪ ಚುನಾವಣೆ ಫಲಿತಾಂಶ ಭವಿಷ್ಯದ ಮಂತ್ರದಂಡವಲ್ಲ. ಜನತೆಯ ತೀರ್ಪಿಗೆ ತಲೆಬಾಗಿದ್ದೇನೆ. | ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ
ಈ ಸೋಲು ತಮ್ಮನ್ನು ಧೃತಿಗೆಡಿಸಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರೂ ಅಕ್ಷರಶಃ ಅಧೀರನ್ನಾಗಿಸಿದೆ. ತುಮಕೂರು ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ಸೋಲು, ಮಂಡ್ಯದಲ್ಲಿ ನಿಖಿಲ್ ಪರಾಜಯ, ಶಿರಾದಲ್ಲಿ ಅಮ್ಮಾಜಮ್ಮ ಪರಾಭವ ಆಘಾತವುಂಟು ಮಾಡಿವೆ.
ಶಿರಾ ಮತ್ತು ರಾಜರಾಜೇಶ್ವರಿನಗರ ಎರಡೂ ಕ್ಷೇತ್ರಗಳೂ ಜೆಡಿಎಸ್ಗೆ ಗಟ್ಟಿ ನೆಲೆ ಇರುವವು. ಪಕ್ಷದಿಂದ ಯಾರನ್ನೇ ನಿಲ್ಲಿಸಿದರೂ ಆರ್ಆರ್ನಗರದಲ್ಲಿ 50-60 ಸಾವಿರ ಮತಗಳಿಗೆ ಮೋಸ ಇರುತ್ತಿರಲಿಲ್ಲ. ಆದರೆ, ಈ ಬಾರಿ ಜೆಡಿಎಸ್ ಬಗ್ಗೆ ಮತದಾರ ಮುನಿಸಿಕೊಂಡಿದ್ದಾನೆ. ಅಭ್ಯರ್ಥಿ ಕೃಷ್ಣಮೂರ್ತಿಗೆ 10,251 ಮತ ಬಂದಿರುವುದು ಪಕ್ಷ ತನ್ನ ನೆಲೆ ಕೆಳೆದುಕೊಳ್ಳುತ್ತಿರುವುದರ ಸಂಕೇತ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಕಳೆದ ಚುನಾವಣೆಯಲ್ಲಿ 60 ಸಾವಿರ ಮತ ಪಡೆದಿದ್ದು, ಈ ಬಾರಿ ಹೀನಾಯ ಸ್ಥಿತಿ ಕಾರ್ಯಕರ್ತರಲ್ಲಿ ಹಲವು ಅನುಮಾನ ಹುಟ್ಟಿಸಿದೆ. ಹೊಂದಾಣಿಕೆ ರಾಜಕಾರಣವಿರಬಹುದೇನೋ ಎಂಬ ಶಂಕೆಯೂ ವ್ಯಕ್ತವಾಗಿದೆ.
ಕೈಕೊಟ್ಟ ಒಕ್ಕಲಿಗರು: ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರದ್ದೇ ಪಾರಮ್ಯ. ಸುಮಾರು 1 ಲಕ್ಷಕ್ಕೂ ಅಧಿಕ ಒಕ್ಕಲಿಗ ಮತದಾರರಿದ್ದು, 40 ಸಾವಿರ ಅಲ್ಪಸಂಖ್ಯಾತ ಮತಗಳು, ಎಸ್ಸಿ-ಎಸ್ಟಿ 50 ಸಾವಿರ ಮತಗಳಿದ್ದು, ಈ ಮತಗಳು ಕೈಹಿಡಿಯಬಹುದೆಂಬ ಲೆಕ್ಕಾಚಾರ ತಲೆಕೆಳಗಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಕೂಡ ಒಕ್ಕಲಿಗ ಸಮುದಾಯಕ್ಕೆ ಸೇರಿರುವುದರಿಂದ ಮತ ವಿಭಜೆನೆಗೊಂಡು ಜೆಡಿಎಸ್ಗೆ ದೊಡ್ಡ ಏಟು ಬಿದ್ದಿದೆ.
‘ಶಿರಾ’ ಜೆಡಿಎಸ್ಗೆ ಕಹಿ: ಶಿರಾದಲ್ಲಿ ಅನುಕಂಪ ಕೈಹಿಡಿಯಬಹುದೆಂಬ ಹಿನ್ನೆಲೆಯಲ್ಲಿ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮಗೆ ಜೆಡಿಎಸ್ ಟಿಕೆಟ್ ಕೊಟ್ಟಿತ್ತು. ಆದರೆ, ಚುನಾವಣೆ ಆರಂಭದಲ್ಲೇ ಅಮ್ಮಾಜಮ್ಮ ಕರೊನಾ ಸೋಂಕಿಗೆ ಒಳಗಾಗಿ ಪ್ರಚಾರಕ್ಕೆ ಹಿನ್ನಡೆಯಾಗಿತ್ತು. ಬಿಜೆಪಿ ಹಾಗೂ ಕಾಂಗ್ರೆಸ್ನ ಭರಾಟೆಯಲ್ಲಿ ಜೆಡಿಎಸ್ ಜಜ್ಜರಿತವಾಯಿತು. ಇಲ್ಲೂ ಪಕ್ಷ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತು. ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ದೇವೇಗೌಡರು 10 ದಿನ ಕ್ಷೇತ್ರದಲ್ಲಿ ಠಿಕಾಣಿ ಹೂಡಿ ನಡೆಸಿದ ತಂತ್ರಗಳು ಕೈಹಿಡಿಯಲಿಲ್ಲ. ಜೆಡಿಎಸ್ ವರಿಷ್ಠರು ರೋಡ್ ಶೋ ನಡೆಸಿದಲ್ಲೆಲ್ಲ ಬಹು ದೊಡ್ಡ ಸಂಖ್ಯೆಯ ಜನ ಜಮಾಯಿಸಿದರೇ ಹೊರತು ಅವು ಮತಗಳಾಗಿ ಪರಿವರ್ತನೆಯಾಗಲಿಲ್ಲ.
ದೊಡ್ಡ ಹೊಡೆತ : ಈ ಚುನಾವಣೆ ಬೇರೆಲ್ಲ ಪಕ್ಷಕ್ಕಿಂತ ಜೆಡಿಎಸ್ಗೆ ದೊಡ್ಡ ಹೊಡೆತ ಕೊಟ್ಟಿದೆ. ಈಗಾಗಲೆ ಅನೇಕ ಶಾಸಕರು, ವಿಧಾನ ಪರಿಷತ್ ಸದಸ್ಯರು ಪಕ್ಷ ತೊರೆಯಲು ತುದಿಗಾಲ ಮೇಲೆ ನಿಂತಿದ್ದಾರೆ. ಪಕ್ಷ ದಿನೇದಿನೆ ಸೊರಗುತ್ತಿರುವುದರಿಂದ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದು ದೊಡ್ಡ ಸವಾಲಾಗಿದೆ.