ಸಿಂಧನೂರು ತಾಲೂಕಿನ ಹುಲಗುಂಚಿಯಲ್ಲಿ 20 ನೇ ಶತಮಾನದ ಅಪ್ರಕಟಿತ ಶಾಸನ ಪತ್ತೆಯಾಗಿರುವುದು. ಸಂಶೋಧಕ ಡಾ. ಚನ್ನಬಸಪ್ಪ ಮಲ್ಕಂದಿನ್ನಿ, ಸ್ಥಳೀಯರಾದ ಸಣ್ಣ ಆಲೀಮಪ್ಪ ಮಲ್ಲಯ್ಯ, ನಿಂಗಪ್ಪ ನಾಯಕ, ದುಮತಿ ಗ್ರಾಮದ ಶರಣಪ್ಪ ಬಡಿಗೇರ, ಹಾಗೂ ರಾಗಲಪರ್ವಿಯ ಮಹಾದೇವ ಇದ್ದಾರೆ. 
ಜಿಲ್ಲೆ

ಹುಲಗುಂಚಿಯಲ್ಲಿತಿಂಥಿಣಿ ಮೊನಪ್ಪಯ್ಯ ಕುರಿತ ಮೊದಲ ಶಾಸನ ಪತ್ತೆ

ಸಿಂಧನೂರು: ತಾಲೂಕಿನ ಹುಲಗುಂಚಿಯಲ್ಲಿ ಮೂರು ಅಪ್ರಕಟಿತ ಶಾಸನಗಳು ಪತ್ತೆಯಾಗಿವೆ ಎಂದು ಇತಿಹಾಸ ಉಪನ್ಯಾಸಕ ಹಾಗೂ ಸಂಶೋಧಕ ಡಾ. ಚನ್ನಬಸಪ್ಪ ಮಲ್ಕಂದಿನ್ನಿ ತಿಳಿಸಿದ್ದಾರೆ.

ಈ ಶಾಸನಗಳು ಕ್ರಿ.ಶ.20 ನೇ ಶತಮಾನಕ್ಕೆ ಸೇರಿದ್ದಾಗಿವೆ. ಒಂದು ತುರುಗೋಳ್ ವೀರಗಲ್ಲು, ಹಲವು ನಾಗಶಿಲ್ಪ, ಒಳಕಲ್ಲು, ಪೋತಲಿಂಗೇಶ್ವರ ದೇವಾಲಯ, ಹುಚ್ಚಪ್ಪಯ್ಯನ ಮಠ ಮೊದಲಾದ ಅವಶೇಷಗಳು ಇವೆ.

ಕ್ರಿ.ಶ. 20 ನೇ ಶತಮಾನದ ಮಧ್ಯದ ಭಾಗ

ಕ್ರಿ.ಶ. 20 ನೇ ಶತಮಾನದ ಮಧ್ಯದ ಭಾಗದಲ್ಲಿ ನದಿಚಾಗಿ ನರಸಪ್ಪ ತಾತ ಎಂಬ ಅವಧೂತ ಹುಲಗುಂಚಿ ಪರಿಸರದಲ್ಲಿ ಪ್ರಸಿದ್ಧರಾಗಿದ್ದರು. ಇವರಿಗೆ ನಾಲ್ಕು ಜನ ಶಿಷ್ಯರಿದ್ದು, ಈ ಪೈಕಿ ಹುಚ್ಚಪ್ಪಯ್ಯ ಎಂಬುವವರು ಹುಟ್ಟಿನಿಂದಲೇ ಅಧ್ಯಾತ್ಮದ ಗೀಳು ಹೊಂದಿ ಹುಟ್ಟೂರಾದ ಚಿತ್ರಾಲಿ ತೊರೆದು ಹುಲಗುಂಚಿ ಗ್ರಾಮಕ್ಕೆ ಬಂದು ಇಲ್ಲಿಯೇ ನೆಲೆ ನಿಂತರು.

ಹುಚ್ಚಪ್ಪಯ್ಯ ಮಧ್ಯವಯಸ್ಕರಾಗಿದ್ದಾಗ ತಿಂಥಿಣಿ ಮೋನಪ್ಪಯ್ಯ ಅವರ ಅಧ್ಯಾತ್ಮದ ಚಿಂತನೆಗಳ ಬರಹಗಳಿಗೆ ಮಾರುಹೋಗಿದ್ದರಂತೆ. ಮೋನಪ್ಪಯ್ಯ ಮತ್ತು ಗುರು ನದಿಚಾಗಿ ನರಸಪ್ಪ, ಭದ್ರಕಾಳಿ, ದುರ್ಗಿಯರ ಕುರಿತ ಮಾಹಿತಿಗಳನ್ನು ಕಲ್ಲು ಚಪ್ಪಡಿಗಳಲ್ಲಿ ಹುಚ್ಚಪ್ಪಯ್ಯ ಬರೆಸಿದ್ದಾರೆ. ಈ ಪೈಕಿ ಒಂದು ಶಾಸನವು ಪ್ರಮುಖವಾಗಿದ್ದು, ಮೋನಪ್ಪಯ್ಯ ಸರ್ವಜನಾಂಗದ ಸಮಾನತೆ ಕುರಿತು ಸಾರಿದ ವಿಷಯಗಳನ್ನು ಬರೆಸಿದ್ದಾರೆ.

ಶಿಲೆಯಲ್ಲಿ ಕೆತ್ತಿಸಿದ ಬರವಣಿಗೆ

ಮೋನಪ್ಪಯ್ಯಗೆ ಸಂಬಂಧಿಸಿದ ವಿಷಯಗಳು ಹಸ್ತಪ್ರತಿ ಹಾಗೂ ಪುಸ್ತಕಗಳ ರೂಪದಲ್ಲಿ ದಾಖಲಾಗಿವೆ. ಆದರೆ ಹುಲಗುಂಚಿ ಗ್ರಾಮದಲ್ಲಿ ಮೋನಪ್ಪಯ್ಯನ ವಿಚಾರಗಳು ಶಿಲೆಯಲ್ಲಿ ಕೆತ್ತಿಸಿದ ಬರವಣಿಗೆಯಲ್ಲಿ ದೊರೆತಿರುವುದು ಇದೇ ಮೊದಲನೆಯದಾಗಿದೆ.