ಕೊಡಗು: ಜಿಲ್ಲೆಯ ಮಡಿಕೇರಿ ಹಾಗೂ ಗೋಣಿಕೊಪ್ಪದಲ್ಲಿ ಪ್ರತಿವರ್ಷ ವಿಜೃಂಭಣೆಯಿಂದ ನಡೆಯುತ್ತಿದ್ದ ದಸರಾ ಉತ್ಸವ ಕರೊನಾ ಹಿನ್ನೆಲೆಯಲ್ಲಿ ಈ ಬಾರಿ ಕಳೆಗುಂದಿದೆ. ಸರಳವಾಗಿ ಆಚರಿಸಲು ದಸರಾ ಸಮಿತಿ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಗಿದೆ.
ಮಡಿಕೇರಿ ದಸರಾ: ಪಂಪಿನಕೆರೆಯಲ್ಲಿ ನಾಲ್ಕು ಶಕ್ತಿದೇವತೆಗಳ ಕರಗಗಳಿಗೆ ಪೂಜೆ ಸಲ್ಲಿಸುವ ಮೂಲಕ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡೆ, ಬಹುಭಾಷಾ ಕವಿಗೋಷ್ಠಿ ಹಾಗೂ ಪ್ರಮುಖ ಆಕರ್ಷಣೆಯಾಗಿದ್ದ, ವಿಜೃಂಭಣೆಯಿಂದ ನಡೆಸಲಾಗುತ್ತಿದ್ದ ದಶಮಂಟಪಗಳ ಶೋಭಾಯಾತ್ರೆ ಸೇರಿ ಜನೋತ್ಸವದಲ್ಲಿ ನಡೆಯುತ್ತಿದ್ದ ಎಲ್ಲ ಕಾರ್ಯಕ್ರಮಗಳು ರದ್ದುಗೊಂಡಿವೆ. ವಿಜಯದಶಮಿಯಂದು ರಾತ್ರಿ 10 ಗಂಟೆ ಒಳಗೆ ಹತ್ತು ದೇವಾಲಯಗಳಿಂದ ನಿಗದಿತ ಜನರೊಂದಿಗೆ ಕಲಶ ಹೊತ್ತು ಬನ್ನಿಮಂಟಪಕ್ಕೆ ಹೋಗಲು ಅವಕಾಶ ನೀಡಲಾಗಿದೆ.
ಗೋಣಿಕೊಪ್ಪ ದಸರಾ: ದಕ್ಷಿಣ ಕೊಡಗಿನಲ್ಲಿ ಅದ್ದೂರಿಯಾಗಿ ಆಚರಿಸುತ್ತಿದ್ದ ಗೋಣಿಕೊಪ್ಪ ದಸರಾ ಕೂಡ ಈ ಬಾರಿ ಸರಳವಾಗಿದೆ. ಮೊದಲ ದಿನ ಚಾಮುಂಡೇಶ್ವರಿ ದೇವಿಯ ವಿಗ್ರಹ ಪ್ರತಿಷ್ಠಾಪನೆ ಮಾಡಿದ್ದು, ಪ್ರತಿನಿತ್ಯ ಪೂಜೆ ಸಲ್ಲಿಸಲಾಗುತ್ತಿದೆ. ವಿಜಯದಶಮಿಯಂದು ರಾತ್ರಿ 10 ಗಂಟೆ ಒಳಗೆ ಸೀಗೆತೋಡಿನಲ್ಲಿರುವ ಕೆರೆಯಲ್ಲಿ ವಿಸರ್ಜಿಸಲಾಗುತ್ತದೆ.