ಜಿಲ್ಲೆ

ಏಳು ಜಿಲ್ಲೆಗಳಿಗೆ ರಜತ ಸಂಭ್ರಮ..

ರಾಜ್ಯದಲ್ಲಿ ಏಕಕಾಲಕ್ಕೆ ಉದಯಿಸಿದ ಏಳು ಜಿಲ್ಲೆಗಳಿಗೆ ಸದ್ಯ ಬೆಳ್ಳಿ ಹಬ್ಬದ ವರ್ಷಾಚರಣೆ ಸಂಭ್ರಮ. ಭೌಗೋಳಿಕವಾಗಿ ದೊಡ್ಡದಾದ ಜಿಲ್ಲೆಗಳು ವಿಭಜನೆಗೊಂಡು 7 ಹೊಸ ಜಿಲ್ಲೆಗಳ ಘೋಷಣೆಯಾಗಿ ಆ.24ಕ್ಕೆ 25 ವರ್ಷ ಕಳೆದಿವೆೆ. ದಶಕಗಳ ಹೋರಾಟ, ರಾಜಕೀಯ ಇಚ್ಛಾಶಕ್ತಿಯಿಂದ ದೊರೆತ ಫಲದ ಸಿಂಹಾವಲೋಕನ ಇಲ್ಲಿದೆ.

ಭೌಗೋಳಿಕವಾಗಿ ದೊಡ್ಡದಾದ ಜಿಲ್ಲೆಗಳ ವಿಭಜನೆಯಿಂದ ಆಡಳಿತಾತ್ಮಕವಾಗಿ ಅಷ್ಟೇ ಅಲ್ಲ, ಜನರಿಗೆ ಬಹು ಪ್ರಯೋಜನಗಳಾಗಿವೆ ಎಂಬ ಕೂಗು, ಹೋರಾಟ, ಒತ್ತಾಸೆ ಮುಗಿಯದ ಅಧ್ಯಾಯ! ಯೋಜನಾವಾರು ವೆಚ್ಚ, ತಲಾ ಆದಾಯ, ಭೌತಿಕ, ಆರ್ಥಿಕ ಪ್ರಗತಿ, ಜೀವನಮಟ್ಟ ಸುಧಾರಣೆ ದೃಷ್ಟಿಯಿಂದ ಚಿಕ್ಕ ಜಿಲ್ಲೆಗಳು ಪರಿಣಾಮಕಾರಿ, ನಿರೀಕ್ಷಿತ ಫಲ ನೀಡುತ್ತವೆ ಎನ್ನುವುದು ತಜ್ಞರ ಅಭಿಮತ. ಈ ನಿಟ್ಟಿನಲ್ಲಿ ಜೆ.ಎಚ್.ಪಟೇಲ್ ನೇತೃತ್ವದ ಜನತಾದಳ ಸರ್ಕಾರ ತಳೆದ ದೃಢ ರಾಜಕೀಯ ಇಚ್ಛಾಶಕ್ತಿ, ಗಟ್ಟಿ ನಿರ್ಧಾರಗಳು ರಾಜ್ಯದ ಇತಿಹಾಸ ಪುಟದಲ್ಲಿ ಅಚ್ಚಳಿಯದೇ ಉಳಿದಿವೆ. ಹೊಸ ಜಿಲ್ಲೆಗಳ ರಚನೆ ‘ಜೇನುಗೂಡಿಗೆ ಕೈಹಾಕಿದಂತೆ’ ಎಂಬ ಮಾತಿಗೆ ಮುಖ್ಯಮಂತ್ರಿಯಾಗಿ ಜೆ.ಎಚ್.ಪಟೇಲ್ ಬೆದರದೆ ಏಳು ಹೊಸ ಜಿಲ್ಲೆಗಳನ್ನು ಘೋಷಿಸಿದರು. ಮೂಲ ಜಿಲ್ಲೆಗಳಿಂದ ಬೇರ್ಪಟ್ಟು 1997ರ ಆಗಸ್ಟ್ 24ರಂದು ಏಕಕಾಲಕ್ಕೆ ಏಳು ಹೊಸ ಜಿಲ್ಲೆಗಳು ಉದಯಿಸಿ, 2022ರ ಆ.24ಕ್ಕೆ 25 ವಸಂತಗಳು ಪೂರೈಸಿವೆ.

ಇದಾದ ನಂತರವೂ ಯಾದಗಿರಿ, ಇತ್ತೀಚೆಗೆ ವಿಜಯನಗರ ಜಿಲ್ಲೆ ಹೊಸದಾಗಿ ಅಸ್ತಿತ್ವಕ್ಕೆ ಬಂದಿದ್ದು, ರಾಜ್ಯದ ಒಟ್ಟು ಜಿಲ್ಲೆಗಳ ಸಂಖ್ಯೆ 31ಕ್ಕೇರಿದೆ. ಇಷ್ಟಾಗಿಯೂ ಚಿಕ್ಕೋಡಿ, ಗೋಕಾಕ, ಶಿರಸಿ, ಶಿಕಾರಿಪುರ, ಮಧುಗಿರಿ ಹೀಗೆ ಹೊಸ ಜಿಲ್ಲೆಗಳ ಬೇಡಿಕೆ ಸರತಿ ಸಾಲುಗಟ್ಟಿ ನಿಂತಿವೆ.

ಈವರೆಗೆ ಆಗಿದ್ದೇನು?

  • ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ ಹಿನ್ನೀರಿನಿಂದ ನೀರಾವರಿ ಪ್ರದೇಶ ವಿಸ್ತರಣೆ, ಆರ್ಥಿಕವಾಗಿ ಸದೃಢ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಪ್ರಗತಿ.
  • ಚಾಮರಾಜನಗರ: ಕಬಿನಿ ಮೊದಲ ಹಂತದ ಯೋಜನೆ ಅನುಷ್ಠಾನ, ಕೈಗಾರಿಕಾ ಪ್ರದೇಶ ಸ್ಥಾಪನೆ, ರಾಷ್ಟ್ರೀಯ ಹೆದ್ದಾರಿ, ರಸ್ತೆಗಳ ಅಭಿವೃದ್ಧಿ ಸುಸಜ್ಜಿತ ಜಿಲ್ಲಾ ಆಸ್ಪತ್ರೆ, ವೈದ್ಯಕೀಯ ಕಾಲೇಜು ಸ್ಥಾಪನೆ.
  • ದಾವಣಗೆರೆ: ವಿಶ್ವ ವಿದ್ಯಾಲಯ ಸ್ಥಾಪನೆ, ರಾಷ್ಟ್ರೀಯ, ಸಹಕಾರಿ ಬ್ಯಾಂಕಿಂಗ್ ಕ್ಷೇತ್ರ ಶಕ್ತಿಯುತ, ತಲಾ ಆದಾಯ ವೃದ್ಧಿ, ಜೀವನಮಟ್ಟ ಸುಧಾರಣೆ. ಶಿಕ್ಷಣ, ವಸತಿ ಮೂಲ ಸೌಲಭ್ಯ ಅಭಿವೃದ್ಧಿ.
  • ಗದಗ: ವೈದಕೀಯ, ಇಂಜಿನಿಯರಿಂಗ್ ಕಾಲೇಜುಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ವಿಶ್ವ ವಿದ್ಯಾಲಯ ಸ್ಥಾಪನೆ. ಕಪ್ಪತ್ತಗುಡ್ಡ ವನ್ಯಜೀವಿ ಧಾಮವೆಂದು ಘೋಷಣೆ.
  • ಹಾವೇರಿ: ವೈದ್ಯಕೀಯ ಕಾಲೇಜು, ಜಾನಪದ ವಿವಿ, ಜವಳಿ ಪಾರ್ಕ್, ಮೆಗಾ ಡೇರಿ, ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ. ಶಿಗ್ಗಾಂವಿ, ಸವಣೂರ, ಬಾಳಂಬೀಡ, ಮಡ್ಲೂರ, ಸರ್ವಜ್ಞ, ದುರ್ಗಾದೇವಿ, ಗುಡ್ಡದಮಾದಾಪುರ, ಅಸುಂಡಿ ಸೇರಿ ಅನೇಕ ಏತ ನೀರಾವರಿ ಯೋಜನೆಗಳು ಜಾರಿ. ಕಾಗಿನೆಲೆ, ಬಾಡ ಅಭಿವೃದ್ಧಿ ಪ್ರಾಧಿಕಾರ, ಸರ್ವಜ್ಞ ಪ್ರಾಧಿಕಾರ ರಚನೆ.
  • ಕೊಪ್ಪಳ: ವಿಶ್ವ ಪ್ರಸಿದ್ಧ ಕಿನ್ನಾಳ ಬೊಂಬೆಗಳಿಗೆ ಉತ್ತೇಜನ, ಮಾರುಕಟ್ಟೆ ಒದಗಿಸಲು ಉದ್ದೇಶಿತ ದೇಶದ ಮೊದಲ ಆಟಿಕೆ ಕ್ಲಸ್ಟರ್ ಘೋಷಣೆ. ವೈದ್ಯಕೀಯ ಕಾಲೇಜು ಸ್ಥಾಪನೆ, ಮೂರು ರಾಷ್ಟ್ರೀಯ ಹೆದ್ದಾರಿ ಜಾಲದ ಸಂಪರ್ಕ, ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸ್ಥಾಪನೆ.
  • ಉಡುಪಿ: ಮೂಲ ಸವಲತ್ತುಗಳು ಅಭಿವೃದ್ದಿ, ರಸ್ತೆಗಳ ವಿಸ್ತರಣೆ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಖಾಸಗಿ ವಲಯ ಮುಂಚೂಣಿ. ಯುಪಿಸಿಎಲ್, ಐಎಸ್​ಪಿಆರ್​ಎಲ್​ಗಳಂಥ ಬೃಹತ್ ಕಂಪನಿಗಳು, ಮೀನುಗಾರಿಕೆ, ಹೆಂಚಿನ ಕಾರ್ಖಾನೆಗಳಿವೆ. ಪಡುಬಿದ್ರಿ ಬ್ಲೂ ಫ್ಲ್ಯಾಗ್ ಬೀಚ್, ಮಲ್ಪೆ ಬೀಚ್​ನಲ್ಲಿ ಸ್ವಲ್ಪ ಅಭಿವೃದ್ಧಿ.

ಮುಂದೆ ಆಗಬೇಕಾದ್ದೇನು?

  • ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ತರಿಗೆ ನೆಮ್ಮದಿ ಬದುಕು, ಪುನರ್ವಸತಿ ಕೇಂದ್ರಗಳಿಗೆ ಅಗತ್ಯ ಸೌಲಭ್ಯ, ನೇಕಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ, ಕೈಗಾರಿಕೆಗಳ ಸ್ಥಾಪನೆ, ಸರ್ಕಾರಿ ವಲಯದಲ್ಲಿ ಶಿಕ್ಷಣ, ಆರೋಗ್ಯ ಕ್ಷೇತ್ರದ ಸುಧಾರಣೆ.
  • ಚಾಮರಾಜನಗರ: ಕಬಿನಿ ಎರಡನೇ ಹಂತದ ಯೋಜನೆ, ಕಾನೂನು ಕಾಲೇಜು, ಪ್ರತ್ಯೇಕ ವಿವಿ ಸ್ಥಾಪನೆ, ಚಾಮರಾಜನಗರದಿಂದ ಕೊಳ್ಳೇಗಾಲ ಮಾರ್ಗವಾಗಿ ಬೆಂಗಳೂರಿಗೆ ರೈಲು ಮಾರ್ಗ, ಕಾಡಂಚಿನ ಗ್ರಾಮಗಳಿಗೆ ಮೂಲ ಸೌಕರ್ಯ.
  • ದಾವಣಗೆರೆ: ಕೈಗಾರಿಕೆಗಳ ಸ್ಥಾಪನೆ, ಹೆಚ್ಚು ಉದ್ಯೋಗಾವಕಾಶ ಸೃಷ್ಟಿ. ಕೃಷಿ ಉತ್ಪಾದನೆಗೆ ಪೂರಕವಾಗಿ ಆಹಾರ ಸಂಸ್ಕರಣೆ ಮತ್ತು ಮೌಲ್ಯವರ್ಧನೆಗೆ ಒತ್ತು.
  • ಗದಗ: ತುಂಗಭದ್ರಾ, ಮಲಪ್ರಭಾ ನದಿಗಳ ನೀರಿನ ಬಳಕೆ, ಕುಡಿಯುವ ನೀರಿನ ಸಮಸ್ಯೆ ನಿವಾರಣೆ, ಕೈಗಾರಿಕೆಗಳ ಸ್ಥಾಪಿಸಿ ಉದ್ಯೋಗ ಸೃಷ್ಟಿ, ಲಕ್ಕುಂಡಿ ಪ್ರಾಚ್ಯವಸ್ತುಗಳ ಪ್ರಾಧಿಕಾರ ರಚನೆ, ಜಿಲ್ಲೆ ಆಂತರಿಕವಾಗಿ ಬಲವರ್ಧನೆ.
  • ಹಾವೇರಿ: ನಗರ-ಪಟ್ಟಣ, ಹಳ್ಳಿಗಳ ಮಧ್ಯೆ ತಾರತಮ್ಯ ವಿಲ್ಲದೆ ಸಮಗ್ರ ಅಭಿವೃದ್ಧಿ. ಜಿಲ್ಲಾ ಕೇಂದ್ರದ ಅಭಿವೃದ್ಧಿಗೆ ವೇಗ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಸ್ಥಾಪನೆ.
  • ಕೊಪ್ಪಳ: ಅಂಜನಾದ್ರಿ ಬೆಟ್ಟ, ಪಂಪಾಸರೋವರ ಸೇರಿ ಪ್ರವಾಸೋದ್ಯಮದ ವಿಪುಲ ಅವಕಾಶ ಬಳಕೆ, ಮುನಿರಾಬಾದ್-ಮಹೆಬೂಬನಗರ ರೈಲ್ವೆ ಮಾರ್ಗ ತ್ವರಿತ ಪೂರ್ಣ, ವಿಮಾನ ನಿಲ್ದಾಣ ಸ್ಥಾಪನೆ, ಸಿಂಗಟಾಲೂರು, ಕೊಪ್ಪಳ ಏತ ನೀರಾವರಿ ಯೋಜನೆಗಳ ಅನುಷ್ಠಾನ.
  • ಉಡುಪಿ: ಕೃಷ್ಣಮಠ, ಕೊಲ್ಲೂರಿನಂತಹ ಪ್ರಮುಖ ದೇವಸ್ಥಾನ, ಪ್ರವಾಸಿ ತಾಣಗಳು ಕೇಂದ್ರಿತ ಪ್ರವಾಸಿ ಪ್ಯಾಕೇಜ್, ಬಂದರುಗಳ ಅಭಿವೃದ್ಧಿ, ತೆಂಗಿನ ಕೃಷಿಗೆ ಮೌಲ್ಯವರ್ಧನೆ, ಉದ್ಯೋಗ ಸೃಜನೆ. ಸಂಪರ್ಕ ವಂಚಿತ ಹಳ್ಳಿಗಳಿಗೆ ರಸ್ತೆ, ಇನ್ನೆರಡು ಉಪವಿಭಾಗ ಕಚೇರಿಗಳು, ವಿಮಾನ ನಿಲ್ದಾಣ.

ಯಾವ ಜಿಲ್ಲೆಗಳಿಗೆ ರಜತ ಸಂಭ್ರಮ?

  • ಬಾಗಲಕೋಟೆ
  • ಚಾಮರಾಜನಗರ
  • ದಾವಣಗೆರೆ
  • ಗದಗ
  • ಹಾವೇರಿ
  • ಕೊಪ್ಪಳ
  • ಉಡುಪಿ

ಯಾವ್ಯಾವ ಜಿಲ್ಲೆಗಳಿಂದ ಬೇರ್ಪಟ್ಟವು?

  • ವಿಜಯಪುರ
  • ಮೈಸೂರು
  • ಚಿತ್ರದುರ್ಗ
  • ಧಾರವಾಡ
  • ರಾಯಚೂರು
  • ದಕ್ಷಿಣಕನ್ನಡ.

ಜಿಲ್ಲಾ ಕೇಂದ್ರಗಳಾಗಿ ಏಕರೂಪತೆ

ರಜತ ಸಂಭ್ರಮದಲ್ಲಿರುವ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿ ಜಿಲ್ಲಾಮಟ್ಟದ ಸರ್ಕಾರಿ ಕಚೇರಿಗಳು, ನ್ಯಾಯಾಲಯ ಸಂಕೀರ್ಣ, ರಸ್ತೆ, ವಿದ್ಯುತ್ ಸೇರಿ ಮೂಲ ಸವಲತ್ತುಗಳ ಅಭಿವೃದ್ಧಿ ಸಹಿತ ಕೆಲಮಟ್ಟಿಗೆ ಭೌತಿಕ ಪ್ರಗತಿಯಾಗಿದೆ. ಕೈಗಾರಿಕಾ ಪ್ರದೇಶ ಸ್ಥಾಪನೆ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ಕಂಡಿದ್ದರೂ ನಿರೀಕ್ಷೆಗೆ ಹೋಲಿಸಿದರೆ ಬಹಳ ಕಡಿಮೆ. ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳು, ನೀರಾವರಿ ಪ್ರದೇಶ ಸೃಜನೆಗೆ ಇನ್ನಷ್ಟು ಗಮನಹರಿಸಬೇಕಿದೆ. ಗ್ರಾಮೀಣ ಮತ್ತು ನಗರ-ಪಟ್ಟಣಗಳ ಅಭಿವೃದ್ಧಿ ವ್ಯತ್ಯಾಸ ಮುಂದುವರಿದಿದೆ. ತಲಾ ಆದಾಯ, ಯೋಜನಾವಾರು ವೆಚ್ಚ ಹಂಚಿಕೆ, ಕೇಂದ್ರ ಸರ್ಕಾರ ಪುರಸ್ಕೃತ ಯೋಜನೆಗಳಿಗೆ ಪರಿಗಣನೆಯಾಗಬೇಕಿದೆ. ಅಗತ್ಯಕ್ಕೆ ಅನುಗುಣವಾಗಿ ಹೊಸ ತಾಲೂಕು ರಚನೆಯಾಗಿದ್ದು, ಪೂರ್ಣ ಪ್ರಮಾಣದಲ್ಲಿ ಎಲ್ಲ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸುವುದು ಬಾಕಿಯಿದೆ.