ತುಮಕೂರು: ಪ್ರಶಸ್ತಿಗೌರವಕ್ಕಿಂತ “ಪಠ್ಯಗೌರವ” ದೊಡ್ಡದು. ಹಾಗಾಗಿ ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ “ಭಾರತರತ್ನ” ಪ್ರಶಸ್ತಿ ಕೊಡುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸುವುದಕ್ಕಿಂತ, ಪರಮಪೂಜ್ಯರ ಬದುಕನ್ನು ದೇಶಾದ್ಯಂತ ಎಲ್ಲ ಶಾಲಾ-ಕಾಲೇಜುಗಳ ಮಕ್ಕಳಿಗೆ ಪಠ್ಯವಾಗಿಸಬೇಕು ಎಂಬ ಕೂಗು ಕೇಳಿಬಂದಿದೆ.
ಪರಮಪೂಜ್ಯರ “ಸಾಹಸಮಯ” ಮತ್ತು “ಸಾಧನಾಮಯ” ಜೀವನಗಾಥೆಯನ್ನು ಪಠ್ಯಪುಸ್ತಕವನ್ನಾಗಿಸಿ ಸಿದ್ಧಗಂಗಾ ಶ್ರೀಗಳ ಬದುಕನ್ನು ಎಲ್ಲರೂ ಕಡ್ಡಾಯವಾಗಿ ಓದುವಂತೆ ಮಾಡಬೇಕು ಎಂದು ಎಂದು ಕೇಂದ್ರ ಸರ್ಕಾರಕ್ಕೆ ಹಿರೇಮಠದ ಅಧ್ಯಕ್ಷ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದ್ದಾರೆ. ಇದನ್ನೂ ಓದಿರಿ ದೇಗುಲಕ್ಕೆ ಬಂದು ತಪ್ಪು ಕಾಣಿಕೆ ಸಲ್ಲಿಸಿದ ಮಾಜಿ ಸಿಎಂ ಕುಮಾರಸ್ವಾಮಿ! ಕಾರಣ ಇಲ್ಲಿದೆ
ಪ್ರಶಸ್ತಿಗೌರವಕ್ಕಿಂತ ಪಠ್ಯಗೌರವ ದೊಡ್ಡದು. ಪ್ರಶಸ್ತಿಗೌರವ ಪೂಜ್ಯರನ್ನು ಇನ್ನಷ್ಟು, ಮತ್ತಷ್ಟು ದೊಡ್ಡವರನ್ನಾಗಿಸಬಹುದು. ಆದರೆ ಪಠ್ಯಗೌರವ ಅವರ ಹಾಗೆ ಎಲ್ಲರನ್ನೂ ದೊಡ್ಡವರನ್ನಾಗಿಸುತ್ತದೆ. ಸಿದ್ಧಗಂಗಾ ಶ್ರೀಗಳ ಬದುಕನ್ನ ಓದಿದ ಎಲ್ಲರೂ ಅವರ ಚಿಂತನೆಯನ್ನ ಮೈಗೂಡಿಸಿಕೊಳ್ಳಬೇಕು ಎಂದು ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಪರಮಪೂಜ್ಯರ ಬದುಕು “ಐಚ್ಛಿಕ” ಓದು ಆಗಬಾರದು. ಅದು ಕಡ್ಡಾಯದ ಓದಾಗಬೇಕು ಎಂದು ಡಾ.ಶಿವಾನಂದ ಶಿವಾಚಾರ್ಯರು ಆಶಯ ವ್ಯಕ್ತಪಡಿಸಿದ್ದಾರೆ.