ದಾವಣಗೆರೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ನಾಳೆ ದಾವಣಗೆರೆಯಲ್ಲಿ ನಡೆಯಲಿರುವ ಸಿದ್ದರಾಮೋತ್ಸವ ಕಾರ್ಯಕ್ರಮದ ಮೇಲೆ ವರುಣನ ಅಡ್ಡಿಯಾಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದ್ದು, ದಾವಣಗೆರೆಯಲ್ಲಿ ಇಂದು ಬೆಳಗಿನ ಜಾವ ಸುರಿದ ಭಾರಿ ಮಳೆಯಿಂದಾಗಿ ಸಿದ್ದರಾಮೋತ್ಸವದ ಫ್ಲೆಕ್ಸ್ ಹಾಗೂ ಬಂಟಿಂಗ್ಸ್ ನೆಲಕ್ಕುರುಳಿವೆ.
ಹುಟ್ಟುಹಬ್ಬ ಕಾರ್ಯಕ್ರಮ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಶುಭಾಶಯ ಕೋರಿ ಫ್ಲೆಕ್ಸ್ಗಳನ್ನು ಹಾಕಲಾಗಿತ್ತು. ಇಂದು ಬೆಳಗ್ಗೆಯೇ ಧಾರಾಕಾರ ಮಳೆಯಾದ್ದರಿಂದ ಬೃಹದಾಕಾರದ ಫ್ಲೆಕ್ಸ್ಗಳು ಸಂಪೂರ್ಣವಾಗಿ ಕುಸಿದು ಬಿದ್ದಿವೆ. ಮಳೆ ಹೀಗೆಯೇ ಮುಂದುವರಿದಲ್ಲಿ ಇನ್ನಷ್ಟು ಅವಾಂತರವಾಗುವ ಸಾಧ್ಯತೆ ಇದೆ.
ಸಿದ್ದರಾಮಯ್ಯ ಅವರ 75ನೇ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಈಗಾಗಲೇ ದಾವಣಗೆರೆಯಲ್ಲಿ ಸಕಲ ಸಿದ್ಧತೆ ನಡೆದಿದೆ. ರಾಜ್ಯದ ಮೂಲೆ ಮೂಲೆಗಳಿಂದ ಜನರನ್ನು ಕರೆತರಲು 7 ಸಾವಿರಕ್ಕೂ ಹೆಚ್ಚು ಬಸ್ಗಳು ಬುಕ್ ಆಗಿವೆ. ಕಾರ್ಯಕ್ರಮಕ್ಕೆ ಬರುವ ಜನರಿಗೆ ಭೂರಿ ಭೋಜನನ್ನು ಸಹ ಏರ್ಪಡಿಸಲಾಗಿದೆ. ಬಹಳ ವಿಜೃಂಭಣೆಯಿಂದ ಕಾರ್ಯಕ್ರಮ ನಡೆಸುವ ಮೂಲಕ ಸಿಎಂ ಸ್ಥಾನಕ್ಕಾಗಿ ಹೈಕಮಾಂಡ್ಗೆ ಸ್ಪಷ್ಟ ಸಂದೇಶ ರವಾನಿಸುವ ಉದ್ದೇಶ ಈ ಸಿದ್ದರಾಮೋತ್ಸವದ ಹಿಂದಿದೆ ಎಂದು ರಾಜಕೀಯಲ ವಯಲದಲ್ಲಿ ಚರ್ಚಿತವಾಗಿದೆ. ಆದರೆ, ವರುಣನ ಅಬ್ಬರ ನಾಳಿನ ಕಾರ್ಯಕ್ರಮಕ್ಕೆ ಅಡ್ಡಿಯಾಗುವ ಸಾಧ್ಯತೆಯು ಇದೆ.