ಜಿಲ್ಲೆ

'ಮಹಾನಾಯಕ' ಯಾರೆಂದು ಗೊತ್ತಿಲ್ಲ; ಗೊತ್ತಿದ್ರೆ ಹೇಳಿ!

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ಸಿಡಿ ಪ್ರಕರಣದಲ್ಲಿ ತಗುಲಿಕೊಂಡಿರುವ ರಮೇಶ್ ಜಾರಕಿಹೊಳಿ ಪ್ರಸ್ತಾಪಿಸಿದ 'ಮಹಾನಾಯಕ' ಯಾರೆಂದು ತಮಗೆ ಗೊತ್ತಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ‌.

ಕಾಂಗ್ರೆಸ್ ‌ನಲ್ಲಿ‌ ಬಹಳಷ್ಟು ನಾಯಕರಿದ್ದಾರೆ, ಮಹಾ ನಾಯಕಿಯರೂ ಇದ್ದಾರೆ. ಆದರೆ ಅವರು (ರಮೇಶ್ ಜಾರಕಿಹೊಳಿ) ಹೇಳಿದ ಮಹಾನಾಯಕ ಯಾರೆಂದು ಗೊತ್ತಿಲ್ಲ. ನಿಮಗೆ ಗೊತ್ತಿದ್ದರೆ ಹೇಳಿ ಎಂದು ಸಿದ್ದರಾಮಯ್ಯ ಪತ್ರಕರ್ತರ ಕಾಲೆಳೆದರು.

ಮಹಾನಾಯಕ ಯಾರೆಂದು ಗೊತ್ತಿದ್ದರೆ, ಶಾಕಿಂಗ್ ಸಾಕ್ಷ್ಯ ಇದ್ದರೆ ತನಿಖಾಧಿಕಾರಿ ಮುಂದೆ ಇಡಲಿ. ದಾಖಲೆ ಮುಚ್ಚಿಡುವುದು ಸಹ ಅಪರಾಧವಾಗುತ್ತದೆ ಎಂದ ಅವರು ಏನೋ ಇದೆ ಎಂದು ಗುಮ್ಮನ ತೋರಿಸುವುದು ಸರಿಯಲ್ಲ ಎಂದು ರಮೇಶ್ ಜಾರಕಿಹೊಳಿ ಉದ್ದೇಶಿಸಿ ಕುಟುಕಿದರು.

ಸಿಡಿ ಬಿಡುಗಡೆ ಬಳಿಕ‌ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ ರಮೇಶ್ ಜಾರಕಿಹೊಳಿ, ಸಿಡಿ ತಯಾರಿಕೆ ಬಿಡುಗಡೆ ಹಿಂದೆ ಕಾಂಗ್ರೆಸ್‌ನ ಮಹಾ ನಾಯಕರಿದ್ದಾರೆ ಎಂದು ಹೇಳಿದ್ದರು.