ಜಿಲ್ಲೆ

ಬಣ್ಣದ ವೇಷಧಾರಿ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ ಇನ್ನಿಲ್ಲ

ಸೌಮ್ಯ ಆರ್

ಬಂಟ್ವಾಳ: ತೆಂಕುತಿಟ್ಟು ಯಕ್ಷಗಾನದ ಬಣ್ಣದ ವೇಷಧಾರಿ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್(60) ಭಾನುವಾರ ಮಧ್ಯಾಹ್ನ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

1965 ಡಿ.17ರಂದು ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾಮದ ಸಿದ್ದಕಟ್ಟೆಯಲ್ಲಿ ಬಾಬು ಶೆಟ್ಟಿಗಾರ್ ಮತ್ತು ಗಿರಿಯಮ್ಮ ದಂಪತಿಯ ಪುತ್ರನಾಗಿ ಜನಿಸಿದ್ದರು. ಸಿದ್ದಕಟ್ಟೆ ಸೇಂಟ್ ಪ್ಯಾಟ್ರಿಕ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದ ಅವರ ಯಕ್ಷಗಾನ ಆಸಕ್ತಿ ರಂಗಸ್ಥಳದವರೆಗೆ ಕರೆದೊಯ್ಯಿತು. ರೆಂಜಾಳ ರಾಮಕೃಷ್ಣ ರಾವ್, ಬಣ್ಣದ ಮಹಾಲಿಂಗ ಅವರ ಬಳಿ ವೇಷ, ನಾಟ್ಯ ಮತ್ತು ರಂಗದ ನಡೆಗಳ ಕುರಿತು ಕಲಿತುಕೊಂಡ ಅವರು, ಇರಾ ಗೋಪಾಲಕೃಷ್ಣ ಭಾಗವತ, ಸುಣ್ಣಂಬಳ ವಿಶ್ವೇಶ್ವರ ಭಟ್, ಬೆಳ್ಳಾರೆ ಮಂಜುನಾಥ ಭಟ್ ಮತ್ತು ಹಿರಿಯ ಕಲಾವಿದರಿಂದ ಹೆಚ್ಚಿನ ಮಾಹಿತಿ ಪಡೆದುಕೊಂಡರು.

2 ವರ್ಷ ಕಟೀಲು 2ನೇ ಮೇಳದಲ್ಲಿ ನೇಪಥ್ಯ ಕಲಾವಿದನಾಗಿ ತಿರುಗಾಟ ಆರಂಭಿಸಿದ ಬಳಿಕ ಕಟೀಲು 1ನೇ ಮೇಳದಲ್ಲಿ 8 ವರ್ಷ ಬಣ್ಣದ ವೇಷಧಾರಿಯಾಗಿ ತಿರುಗಾಟ ನಡೆಸಿದರು. ಬಳಿಕ 13 ವರ್ಷ ಧರ್ಮಸ್ಥಳ ಮೇಳದಲ್ಲಿ ಬಣ್ಣದ ವೇಷಧಾರಿಯಾಗಿ ತಿರುಗಾಟ ನಡೆಸಿ 18 ವರ್ಷಗಳ ಕಾಲ ಹೊಸನಗರ, ಎಡನೀರು ಮತ್ತು ಹನುಮಗಿರಿ ಮೇಳಗಳಲ್ಲಿ ತಿರುಗಾಟ ನಡೆಸಿದ್ದಾರೆ.

ಯಕ್ಷಗಾನ ಕ್ಷೇತ್ರದಲ್ಲಿ 40ಕ್ಕೂ ಅಧಿಕ ವರ್ಷಗಳ ಕಾಲ ವ್ಯವಸಾಯ ಮಾಡಿರುವ ಸದಾಶಿವ ಶೆಟ್ಟಿಗಾರರು ಪತ್ನಿ, ಇಬ್ಬರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ.

ಹಲವು ಪ್ರಶಸ್ತಿ, ಸನ್ಮಾನ

ಮಂಗಳೂರು ವಿವಿಯಿಂದ ಇತ್ತೀಚೆಗೆ ಯಕ್ಷಮಂಗಳ ಪ್ರಶಸ್ತಿ ಸ್ವೀಕರಿಸಿದ್ದ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ ಅವರಿಗೆ ಹಲವು ಪ್ರಶಸ್ತಿ, ಸನ್ಮಾನಗಳು ಸಂದಿವೆ. ಭ್ರಾಮರಿ ಯಕ್ಷಮಣಿ ಪ್ರಶಸ್ತಿ, ಪೇಜಾವರ ಶ್ರೀ ಜನ್ಮದಿನದ ಶ್ರೀರಾಮ ವಿಟ್ಠಲ ಪ್ರಶಸ್ತಿ, ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ, ಕೀಲಾರು ಗೋಪಾಲಕೃಷ್ಣಯ್ಯ ಪ್ರಶಸ್ತಿ, ಹರೇಕಳ ಪಾವೂರು, ಬಿ.ಸಿ.ರೋಡಿನಲ್ಲಿ ಅಲ್ಲದೆ ಇನ್ನೂ ಅನೇಕ ಸಂಘ-ಸಂಸ್ಥೆಗಳು ಸನ್ಮಾನಿಸಿವೆ.