ಕಾರವಾರ: ರಾಜ್ಯದಲ್ಲಿ ಅತಿ ಕಡಿಮೆ ಮತದಾನವಾಗುವ ಮತಗಟ್ಟೆ ಎಂಬ ಕುಖ್ಯಾತಿಗೆ ಪಾತ್ರವಾಗಿರುವ ಇಲ್ಲಿನ ಕದಂಬ ನೌಕಾನೆಲೆಯ ಒಳಗಿರುವ ಮತಗಟ್ಟೆಯನ್ನು ಸ್ಥಗಿತ ಮಾಡಲಾಗಿದೆ. ಅಲ್ಲಿನ ಮತದಾರರ ಹೆಸರುಗಳನ್ನು ಸಮೀಪದ ಬೇರೆ ಮತಗಟ್ಟೆಗೆ ಜತೆಗೆ ಜೋಡಿಸಲಾಗಿದೆ.
ತಾಲೂಕಿನ ಅರಗಾ ಕದಂಬ ನೌಕಾನೆಲೆಯ ಒಳಗಿನ ಕೇಂದ್ರೀಯ ವಿದ್ಯಾಲಯದಲ್ಲಿನರುವ ಮತಗಟ್ಟೆಯಲ್ಲಿ 265 ಮತದಾರರ ಹೆಸರಿತ್ತು. ಆದರೆ, ಯಾವುದೇ ಚುನಾವಣೆಯಲ್ಲೂ ಅಲ್ಲಿ ಮತದಾನ ಮಾಡಿದವರ ಸಂಖ್ಯೆ 25 ದಾಟಿರಲಿಲ್ಲ. 2018 ರ ಎಂಎಲ್‌ಎ ಚುನಾವಣೆಯಲ್ಲಿ ಅಲ್ಲಿ ಶೇ. 30 ರಷ್ಟು 2019 ರ ಎಂಪಿ ಚುನಾವಣೆಯಲ್ಲಿ ಶೇ. 8 ರಷ್ಟು, 2023 ರ ವಿಧಾನಸಭೆ ಚುನಾವಣೆಯಲ್ಲಿ ಶೇ.3.30 ರಷ್ಟು ಮಾತ್ರ ಮತದಾನವಾಗಿತ್ತು.
ಒಂದೆಡೆ ಮತದಾನ ಪ್ರಮಾಣ ಹೆಚ್ಚಳಕ್ಕಾಗಿ ಸ್ವೀಪ್ ಕಾರ್ಯಕ್ರಮದಡಿ ಕೋಟ್ಯಂತರ ರೂ. ವೆಚ್ಚ ಮಾಡುತ್ತಿದ್ದರೆ ಇನ್ನೊಂದೆಡೆ ನೌಕಾಸೇನೆಯ ಒಂದು ಮತಗಟ್ಟೆಯಿಂದ ಇಡೀ ಕ್ಷೇತ್ರದ ಹೆಸರು ಹಾಳಾಗುತ್ತಿತ್ತು. ರಾಜ್ಯದಲ್ಲಿ ಅತ್ಯಂತ ಕಡಿಮೆ ಮತದಾನವಾಗುವ ಕ್ಷೇತ್ರ ಎಂಬ ಕುಖ್ಯಾತಿಗೆ ಮತಗಟ್ಟೆ ಪಾತ್ರವಾಗಿತ್ತು. ದೇಶದಲ್ಲಿ ಗೌರವಯುತ ಸ್ಥಾನದಲ್ಲಿರುವ ಹಾಗೂ ಜವಾಬ್ದಾರಿ ಹೊಂದಿರುವ ನೌಕಾಸೇನೆಯ ಅಧಿಕಾರಿಗಳೇ ಹೀಗೆ ಮತದಾನ ಮಾಡದೇ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದರೆ ಹೇಗೆ..? ಎಂಬ ಟೀಕೆ ಪ್ರತಿ ಚುನಾವಣೆಯ ವೇಳೆಯೂ ಕೇಳಿ ಬರುತ್ತಿತ್ತು. ಪರಿಸ್ಥಿತಿಯಿಂದ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಅವರು ನೌಕಾನೆಲೆಗೆ ಭೇಟಿ ನೀಡಿ ಮತದಾರರ ಪಟ್ಟಿ ಪರಿಶೀಲನೆಗೆ ಸಹಕಾರ ನೀಡುವಂತೆ ಕದಂಬ ನೌಕಾನೆಲೆಯ ಮುಖ್ಯಸ್ಥರಿಗೆ ಸೂಚಿಸಿದ್ದರು. ಈ ಬಗ್ಗೆ ಚರ್ಚೆ ನಡೆಸಿದ್ದರು.
ಹಾಗಾಗಿ ಆಗಿನ ತಹಸೀಲ್ದಾರ್ ನಿಶ್ವಲ ನರೋನಾ ಮತಗಟ್ಟೆ ಸ್ಥಳಾಂತರಕ್ಕೆ ಪ್ರಸ್ತಾವನೆ ಕಳಿಸಿದ್ದರು. ಆಗಿನ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಕೂಡ ಅದನ್ನು ಆಯೋಗಕ್ಕೆ ರವಾನಿಸಿದ್ದರು. ಈಗ ಕರಡು ಮತದಾರರ ಪಟ್ಟಿ ಪ್ರಕಟಿಸುವುದಕ್ಕೂ ಮುಂಚೆ ಆಯೋಗ ಒಪ್ಪಿಗೆ ನೀಡಿದ್ದು, ಹಾಲಿ ಜಿಲ್ಲಾಧಿಕಾರಿಗಳ ಅವಧಿಲ್ಲಿ ನೌಕಾನೆಲೆಯ ಒಳಗಿನ ಮತಗಟ್ಟೆ ಬಂದ್ ಮಾಡಲಾಗಿದೆ. ಅಲ್ಲಿನ 265 ಮತದಾರರನ್ನು ಅರಗಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 39 ಕ್ಕೆ ಸ್ಥಳಾಂತರಿಸಲಾಗಿದೆ.
ಮತದಾರರ ಪಟ್ಟಿಯನ್ನು ಕೂಲಂಕುಶವಾಗಿ ಪರಿಶೀಲಿಸಿದಾಗ ನೌಕಾಸೇನೆಯಲ್ಲಿ ಸಾವಿರಾರು ಕುಟುಂಬಗಳು ವಾಸವಿದ್ದರೂ ಕೆಲವರನ್ನು ಬಿಟ್ಟರೆ ಹೆಚ್ಚಿನ ಅಽಕಾರಿ, ಸಿಬ್ಬಂದಿಗಳೆಲ್ಲರೂ ಸೇವಾ ಮತದಾರರಾಗಿದ್ದಾರೆ. ಹೆಚ್ಚಿನವರು ಆಗಾಗ ವರ್ಗಾವಣೆಯಾಗುತ್ತಿರುವುದರಿಂದ ಇಲ್ಲಿ ಮತದಾನ ಹೊಂದಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ಕೇಂದ್ರೀಯ ವಿದ್ಯಾಲಯದ ಮತಗಟ್ಟೆಯಲ್ಲಿರುವ ಹಲವರು ನೌಕಾಸೇನೆ ಬಿಟ್ಟು ಹೊರಗಿನ ಮತದಾರರೂ ಇರುವುದು ಗಮನಕ್ಕೆ ಬಂದಿತ್ತು.
ಕದಂಬ ನೌಕಾನೆಲೆ ನಿರ್ಬಂಧಿತ ಪ್ರದೇಶ. ಅಲ್ಲಿ ನೌಕಾ ಪೊಲೀಸರು ಭದ್ರತೆ ನೋಡಿಕೊಳ್ಳುತ್ತಾರೆ. ರಾಜ್ಯ ಸರ್ಕಾರಿ ಅಧಿಕಾರಿಗಳು ತೆರಳಬೇಕಿದ್ದರೂ ವಿಶೇಷ ಪರವಾನಗಿ ಬೇಕಿತ್ತು. ಮತಗಟ್ಟೆ ಅಧಿಕಾರಿಯಾಗಿರುವ ಅರಗಾ ಗ್ರಾಮ ಆಡಳಿತ ಅಽಕಾರಿಯು ನೌಕಾಸೇನೆಯ ಕೇಂದ್ರೀಯ ವಿದ್ಯಾಲಯದ ಮತಗಟ್ಟೆಗೆ ಮತದಾರರ ಪಟ್ಟಿ ಪರಿಷ್ಕರಣೆಗೆ ತೆರಳಲು ಜಿಲ್ಲಾಧಿಕಾರಿ ಅವರ ಪತ್ರ ಪಡೆದುಕೊಳ್ಳುವ ಪರಿಸ್ಥಿತಿ ಇತ್ತು. ಭದ್ರತೆಯ ದೃಷ್ಟಿಯಿಂದ ಮತದಾರರೂ ಮತದಾನದಿಂದ ವಂಚಿತರಾಗುತ್ತಿದ್ದರು. ಈ ಎಲ್ಲ ಅಂಶಗಳನ್ನು ಗುರುತಿಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.