ಕಾಸರಗೋಡು: ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಪುನಃಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ, ಮೂಡಪ್ಪ ಸೇವೆ ಪ್ರಯುಕ್ತ ಸೀಮೆಯ ವಿವಿಧೆಡೆಗಳಿಂದ ಆಗಮಿಸಿದ ಸ್ವಯಂಸೇವಕರ ತಂಡಗಳು ನಿರಂತರವಾಗಿ ಶ್ರಮದಾನ ಮಾಡುತ್ತಿವೆ. ವಿಶ್ವ ಹಿಂದು ಪರಿಷತ್ ಸೇರಿದಂತೆ ವಿವಿಧ ಸಂಘಟನೆಗಳ ಸಾವಿರಕ್ಕೂ ಮಿಕ್ಕಿ ಕಾರ್ಯಕರ್ತರು ಭಾನುವಾರ ದೇವಸ್ಥಾನದ ಒಳಾಂಗಣ ಹಾಗೂ ಹೊರಭಾಗದಲ್ಲಿ ಶ್ರಮದಾನ ಮಾಡಿದರು.
ಆಬಾಲ ವೃದ್ಧರಾದಿಯಾಗಿ ನಾನಾ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸೀಮೆ ದೇಗುಲದ ಬ್ರಹ್ಮಕಲಶೋತ್ಸವ-ಮೂಡಪ್ಪ ಸೇವೆಯ ಯಶಸ್ಸಿಗಾಗಿ ತಮ್ಮ ಯೋಗದಾನ ಸಮರ್ಪಿಸಿದರು. ಕಾಸರಗೋಡು ಗುಡ್ಡೆ ದೇವಸ್ಥಾನ ಸನಿಹದ ನಿವಾಸಿ, ವಯೋವೃದ್ಧೆ ಪುಷ್ಪಾ ವಯಸ್ಸನ್ನೂ ಲೆಕ್ಕಿಸದೆ ಶ್ರಮದಾನದಲ್ಲಿ ಪಾಲ್ಗೊಳ್ಳುವ ಮೂಲಕ ಗಮನ ಸೆಳೆದರು.
ಬ್ರಹ್ಮಕಲೋತ್ಸವ ಸಂದರ್ಭ ಖಾದ್ಯ ಬಡಿಸಲು ಕಾಸರಗೋಡು ಕೂಡ್ಲು ನಿವಾಸಿ ಸುಬ್ರಹ್ಮಣ್ಯ ಆಚಾರ್ಯ, ಅಚ್ಯುತ ಆಚಾರ್ಯ, ಯೋಗೇಂದ್ರ ಆಚಾರ್ಯ, ಮಾಧವ ಆಚಾರ್ಯ ಅವರ ನೇತೃತ್ವದಲ್ಲಿ ಪಾರಂಪರಿಕ ಗೆರಟೆ ಸೌಟು ತಯಾರಿ ಕಾರ್ಯವೂ ಭರದಿಂದ ಸಾಗುತ್ತಿದೆ. ದೇವಾಲಯದೊಳಗಿನ ವಿವಿಧ ಗುಡಿಗಳ ಸ್ವಚ್ಛತೆ, ಪೇಂಟಿಂಗ್, ಹೊರಾಂಗಣದಲ್ಲಿ ಚಪ್ಪರದೊಳಗಿನ ಕಲ್ಲುಮಣ್ಣು ಸ್ಥಳಾಂತರ ಹೀಗೆ ಬಿಡುವಿಲ್ಲದೆ ಕೆಲಸಕಾರ್ಯಗಳಲ್ಲಿ ಕಾರ್ಯಕರ್ತರು ತೊಡಗಿಸಿಕೊಂಡರು.
ಮಾಣಿಲಶ್ರೀ ಭೇಟಿ: ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಭಾನುವಾರ ದೇವಸ್ಥಾನಕ್ಕೆ ಭೇಟಿ ನೀಡಿ, ಬ್ರಹ್ಮಕಲಶೋತ್ಸವ-ಮೂಡಪ್ಪ ಸೇವೆ ಹಿನ್ನೆಲೆಯಲ್ಲಿ ಬಿರುಸಿನಿಂದ ನಡೆಯುತ್ತಿರುವ ಸಿದ್ಧತಾ ಕಾರ್ಯಗಳ ಬಗ್ಗೆ ಅವಲೋಕನ ನಡೆಸಿ, ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದರು. ಉತ್ಸವದ ಮೆರಗು ಹೆಚ್ಚಿಸುವ ನಿಟ್ಟಿನಲ್ಲಿ ದೇವಸ್ಥಾನಕ್ಕೆ ಭಕ್ತರೊಬ್ಬರು ಬೇತಾಳವನ್ನು ಉದಾರವಾಗಿ ನೀಡಿದ್ದಾರೆ.