ಉಳ್ಳಾಲ: ಬಹಳಷ್ಟು ಕಡೆ ರಾಜಕಾಲುವೆ ಹೂಳೆತ್ತದಿರುವುದು, ಒತ್ತುವರಿ, ಅಸಮರ್ಪಕ ಲೇಔಟ್ ನಿರ್ಮಾಣದಿಂದ ಮಳೆ ನೀರು ಸರಾಗವಾಗಿ ಹರಿಯದೆ ಮೊದಲ ಮಳೆಗೆ ಅವಾಂತರ ಉಂಟಾಗಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
ಮಳೆಯಿಂದಾಗಿ ಕಿರುಸೇತುವೆ ಕುಸಿತಕ್ಕೊಳಗಾದ ಪಿಲಾರ್‌ಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಮಾತನಾಡಿ, ಉಳ್ಳಾಲಬೈಲ್ ಪ್ರದೇಶವೂ ಸಂಪೂರ್ಣ ಜಲಾವೃತಗೊಂಡು ನೂರು ಮನೆಗೆ ಹಾನಿಯುಂಟಾಗಿತ್ತು. ಸೋಮೇಶ್ವರ ಪುರಸಭಾ ವ್ಯಾಪ್ತಿಯ ಅಂಬಿಕಾರೋಡ್ ಮೂರನೇ ಅಡ್ಡ ರಸ್ತೆಯಲ್ಲೂ ರಾಜಕಾಲುವೆ ಉಕ್ಕಿ ಹರಿದ ಪರಿಣಾಮ ಸ್ಥಳೀಯ ಮನೆಗಳಿಗೆ ಹಾನಿಯುಂಟಾಗಿದೆ. ರಾಜಕಾಲುವೆಯ ಕಿರು ಸೇತುವೆಯೂ ಕುಸಿದು ಬಿದ್ದಿದೆ. ಪ್ರಾಕೃತಿಕ ವಿಕೋಪ ಮಾತ್ರವಲ್ಲದೆ, ಮಾನವ ನಿರ್ಮಿತ ಸಮಸ್ಯೆಗಳೂ ಇದಕ್ಕೆ ಕಾರಣ. ಅಂಬಿಕಾರೋಡ್ ಪ್ರದೇಶದಲ್ಲಿ ಲೇಔಟ್ ನಿರ್ಮಾಣಗೊಂಡಿದ್ದು ಮನೆಗಳನ್ನು ನಿರ್ಮಿಸುವಾಗ ಮಳೆನೀರು ಹರಿದು ಹೋಗಲು ಜಾಗ ಬಿಟ್ಟಿಲ್ಲ. ರಾಜಕಾಲುವೆಗೆ ಶೀಘ್ರ ನೂತನ ಸುಸಜ್ಜಿತ ಕಿರುಸೇತುವೆ ನಿರ್ಮಿಸಿಕೊಡಲಾಗುವುದು ಎಂದರು.
ಸೋಮೇಶ್ವರ ಪುರಸಭಾ ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ, ವಿಪಕ್ಷ ನಾಯಕ ಪುರುಷೋತ್ತಮ ಶೆಟ್ಟಿ ಪಿಲಾರು, ಸದಸ್ಯರಾದ ಪರ್ವೀಣ್ ಶಾಜಿದ್, ದೀಪಕ್ ಪಿಲಾರು, ಮುಖ್ಯಾಧಿಕಾರಿ ಮತ್ತಡಿ ಮೊದಲಾದವರು ಉಪಸ್ಥಿತರಿದ್ದರು.