ಬ್ರಹ್ಮಾವರ: ಬಾರಕೂರು ಬಳಿಯ ಬೆಣ್ಣೆಕುದ್ರುವಿನಲ್ಲಿ ಕಿಂಡಿ ಅಣೆಕಟ್ಟು ಕಾಮಗಾರಿ ಹಿನ್ನೆಲೆ ನದಿಗೆ ಅಡ್ಡವಾಗಿ ವಾಡಲಾದ ಬದಲಿ ರಸ್ತೆಯನ್ನು ಇನ್ನೂ ತೆರವು ವಾಡದೆ ಅಪಾಯಕ್ಕೆ ಆಹ್ವಾನಿಸುವಂತಿದೆ.
ಬಾರಕೂರಿನಿಂದ ಬೆಣ್ಣೆಕುದ್ರು ಮೂಲಕ ಪಾಂಡೇಶ್ವರದಿಂದ ಸಾಸ್ತಾನ ರಾಷ್ಟ್ರೀಯ ಹೆದ್ದಾರಿ 66 ಸಂಪರ್ಕ ಕಲ್ಪಿಸಲು ವಾಡಲಾದ ರಸ್ತೆಯಲ್ಲಿ ಕಿರು ಸೇತುವೆ ಇದ್ದು ಇದರಲ್ಲಿ ಅಧಿಕ ಭಾರದ ಲಾರಿಗಳು ಸಂಚರಿಸದಂತೆ ನಿಯಮದ ಪ್ರಕಾರ ಗರ್ಡರ್ ಅಳವಡಿಸಲಾಗಿತ್ತು.
ಅಣೆಕಟ್ಟು ನಿರ್ವಾಣದ ಕಾಮಗಾರಿಯ ಸಾಮಗ್ರಿ ಹಾಗೂ ಸಲಕರಣೆ ಸಾಗಿಸಲು ಕಾಮಗಾರಿಯ ಗುತ್ತಿಗೆದಾದರು ತಾತ್ಕಾಲಿಕವಾಗಿ ಸೇತುವೆಯಲ್ಲಿ ಬದಲಿ ರಸ್ತೆ ಮಾಡಿಕೊಂಡಿದ್ದರು. ಸೇತುವೆಗೆ ಅಡ್ಡಲಾಗಿ ಮಾಡಲಾದ ರಸ್ತೆಯನ್ನು ತೆರವು ಮಾಡದೆ ಇರುವುದರಿಂದ ಸೀತಾನದಿಯ ಕವಲು ನದಿ ಮತ್ತು ಬನ್ನಾಡಿ ಭಾಗದಿಂದ ಬರುವ ನದಿ ನೀರು ಈಗಿನ ಮಟ್ಟಕ್ಕಿಂತ ಹೆಚ್ಚು ಹರಿದರೆ ಬೆಣ್ಣೆಕುದ್ರು ಮತ್ತು ನದಿಯ ತಿರುವಿನ ಜಾಗಕ್ಕೆ ನೀರು ನುಗ್ಗಿ ಬಂದಲ್ಲಿ ಕುಲ ಮಹಾಸ್ತ್ರೀ ಅಮ್ಮನವರ ದೇವಸ್ಥಾನ ಮತ್ತು ಮುನ್ನೂರಕ್ಕೂ ಅಧಿಕ ಮನೆಗಳು ಮತ್ತು ಪಾಂಡೇಶ್ವರ ಭಾಗದ ಕೃಷಿ ಭೂಮಿಯಲ್ಲಿ ಕೃತಕ ನೆರೆ ಸೃಷ್ಟಿಯಾಗಿ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳುವಂತೆ ಜನರು ಆಗ್ರಹಿಸಿದ್ದಾರೆ.