ಜಮೀನು ಖಾತೆ ಮಾಡಿಕೊಡಲು ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟು ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ಶಿವಮೊಗ್ಗ ಎಸಿ ಕಚೇರಿ ಎದುರಿನ ಆಲದ ಮರವೇರಿ ಪ್ರತಿಭಟನೆ ನಡೆಸಿದ ರೈತ ನಾಗರಾಜ್. 
ಶಿವಮೊಗ್ಗ

ಜಮೀನು ಖಾತೆ ಮಾಡಿಕೊಡಲು ಸತಾಯಿಸಿದ ಅಧಿಕಾರಿಗಳು: ತಹಸೀಲ್ದಾರ್ ಕಚೇರಿ ಎದುರೇ ಆಲದ ಮರವೇರಿ ರೈತನ ಹೈಡ್ರಾಮಾ! Farmer Protest

ಶಿವಮೊಗ್ಗ: ಹಲವಾರು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ಜಮೀನಿಗೆ ಸರ್ಕಾರದಿಂದ ಮಂಜೂರಾತಿ ದೊರೆತಿದ್ದರೂ ಖಾತೆ ಮಾಡಿಕೊಡದ ಶಿವಮೊಗ್ಗ ತಹಸೀಲ್ದಾರ್ ಅವರ ಕಾರ್ಯವೈಖರಿಗೆ ಬೇಸತ್ತ ರೈತನೊಬ್ಬ ಉಪವಿಭಾಗಾಧಿಕಾರಿ ಕಚೇರಿ ಎದುರಿನ ಆಲದ ಮರವೇರಿ ಪ್ರತಿಭಟನೆ ನಡೆಸಿದ ಘಟನೆ ವರದಿಯಾಗಿದೆ.

ಶಿವಮೊಗ್ಗ ತಾಲೂಕಿನ ರಾಮೇನಕೊಪ್ಪದ ನಾಗರಾಜ್ ಎನ್ನುವವರೇ ಮರವೇರಿದ ರೈತನಾಗಿದ್ದು, ಜಮೀನಿನ ಖಾತೆ ಮಾಡಿಕೊಡಲು ತಹಸೀಲ್ದಾರ್ ಕಚೇರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸತಾಯಿಸಿದ್ದಾರೆ. ಕಳೆದ 25 ವರ್ಷಗಳಿಗಿಂತ ಹೆಚ್ಚು ಕಾಲದಿಂದ 28 ಕುಟುಂಬಗಳು ತಲಾ 4 ಎಕರೆಯಂತೆ ರಾಮೇನಕೊಪ್ಪ ಗ್ರಾಮದ ಸ.ನಂ. 57ರಲ್ಲಿನ ಜಮೀನನ್ನು ಸಾಗುವಳಿ ಮಾಡಿಕೊಂಡಿದ್ದು, ಅಲ್ಲಿ 11 ರೈತರನ್ನು ಬಿಟ್ಟು ಉಳಿದವರಿಗೆ ಸರ್ಕಾರದಿಂದ ಜಾಗ ಮಂಜೂರಾಗಿದೆ ಎಂದು ದೂರಿದ್ದಾರೆ.

ಜಿಲ್ಲಾಧಿಕಾರಿ ಆದೇಶಕ್ಕೂ ಡೋಂಟ್​ ಕೇರ್!

ಶಿವಮೊಗ್ಗ ಉಪವಿಭಾಗಾಧಿಕಾರಿ 11 ರೈತರಿಗೆ ಮಂಜೂರಾತಿ ರದ್ದುಪಡಿಸಿದ್ದು, ಈ ಆದೇಶದ ವಿರುದ್ಧ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ರೈತರು ಪ್ರಶ್ನಿಸಿದ್ದರು. ರೈತರ ಅರ್ಜಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳನ್ನು ಪುರಸ್ಕರಿಸಿ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿದ್ದ ಆದೇಶ ತಿರಸ್ಕರಿಸಿದ್ದು, ಪ್ರಕರಣ ಸಂಬಂಧ ಹಿತಾಸಕ್ತರಿಂದ ದಾಖಲಾತಿ ಪಡೆದು ಪರಿಶೀಲಿಸಿ ಕ್ರಮ ವಹಿಸುವಂತೆ ಶಿವಮೊಗ್ಗ ತಹಸೀಲ್ದಾರ್ ವಿ.ಎಸ್.ರಾಜೀವ್‌ಗೆ ನಿರ್ದೇಶನ ನೀಡಿ ಆದೇಶಿಸಿದ್ದರು. ಆದರೆ ತಹಸೀಲ್ದಾರ್ ಮತ್ತು ಕಚೇರಿ ಸಿಬ್ಬಂದಿ ರೈತರಿಗೆ ಜಮೀನು ಮಂಜೂರು ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

ಲಕ್ಷಾಂತರ ರೂಪಾಯಿ ಲಂಚಕ್ಕೆ ಬೇಡಿಕೆ!

ಕಳೆದ ಹಲವು ತಿಂಗಳುಗಳಿಂದ ಕಚೇರಿಗೆ ಅಲೆದಾಡಿದರೂ ಕೆಲಸವಾಗಿರಲಿಲ್ಲ. ಈ ನಡುವೆ ಲಕ್ಷಾಂತರ ರೂ. ಲಂಚ ನೀಡಿದ್ದರೂ ಕೆಲಸವಾಗಿಲ್ಲ ಎನ್ನಲಾಗಿದೆ. ಮತ್ತೊಂದೆಡೆ, ತಹಸೀಲ್ದಾರ್ ವಿ.ಎಸ್.ರಾಜೀವ್ ಅವರನ್ನು ವರ್ಗಾವಣೆ ಮಾಡಿರುವ ವಿಚಾರ ತಿಳಿದ ರೈತರು ಬೆಳಗ್ಗೆ ಕಚೇರಿಗೆ ಆಗಮಿಸಿದ್ದರು. ಈ ವೇಳೆ ರೈತ ನಾಗರಾಜ್ ಮರವೇರಿ ಪ್ರತಿಭಟಿಸಿದ್ದಾರೆ. ಜಮೀನಿಗೆ ಖಾತೆ ಮಾಡಿಕೊಡುವವರೆಗೂ ಕೆಳಕ್ಕಿಳಿಯುವುದಿಲ್ಲ ಎಂದು ಪಟ್ಟು ಹಿಡಿದು, ಕೆಲಕಾಲ ಗೊಂದಲದ ವಾತಾವರಣವನ್ನು ನಿರ್ಮಿಸಿದ್ದಾರೆ.

ಕೆಳಗಿಳಿಸಲು ಹರಸಾಹಸ!

ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸಬೇಕು. ತಮ್ಮ ಅಹವಾಲು ಆಲಿಸಬೇಕು. ಬಲವಂತವಾಗಿ ಮರದಿಂದ ಕೆಳಕ್ಕಿಳಿಸಲು ಮುಂದಾದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ಜಿಲ್ಲಾಧಿಕಾರಿ ಇಲ್ಲದ ಕಾರಣ ಉಪವಿಭಾಗಾಧಿಕಾರಿ ಡಾ. ಎಚ್.ಪಿ.ಎಸ್.ಮೈತ್ರಿ ಸ್ಥಳಕ್ಕೆ ಬಂದು ಮರವೇರಿದ್ದ ರೈತನ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.

ಆದರೂ ಆತ ಮರದಿಂದ ಕೆಳಗಿಳಿಯಲು ಒಪ್ಪಿಲ್ಲ. ಈ ವೇಳೆ ಉಪವಿಭಾಗಾಧಿಕಾರಿಗಳು, ಆತನ ಜತೆಗೆ ಬಂದಿದ್ದ ಇತರ ರೈತರೊಂದಿಗೆ ಮಾತುಕತೆ ನಡೆಸಿದ್ದಾರೆ. ಮಧ್ಯಾಹ್ನ 2 ಗಂಟೆವರೆಗೂ ಮರವೇರಿ ಕುಳಿತಿದ್ದ ನಾಗರಾಜ್​, ಭರ್ತಿ ನಾಲ್ಕು ಗಂಟೆ ಬಳಿಕ ಸಾರ್ವಜನಿಕರ, ಪೊಲೀಸರ ಮತ್ತು ಅಗ್ನಿಶಾಮಕದಳ ಸಿಬ್ಬಂದಿಯ ಒತ್ತಾಯಕ್ಕೆ ಮಣಿದು ಕೆಳಗಿಳಿದಿದ್ದಾನೆ.