ಜಿಲ್ಲೆ

ಡ್ರೋನ್ ಗುರುತಿಸಿದ ಸ್ಥಳದಲ್ಲೂ ಸಿಗಲಿಲ್ಲ ಲಾರಿ

Uttara Kannada - Subash Hegde

ಕಾರವಾರ: ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಶನಿವಾರ ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ಗಂಗಾವಳಿ ನದಿಯಲ್ಲಿ ನಾಪತ್ತೆಯಾದ ಟ್ರಕ್ ಗಾಗಿ ಹುಡುಕಾಟ ನಡೆಸಿತು‌‌. ಆದರೆ, ಇದುವರೆಗೂ ಯಾವುದೇ ಅವಶೇಷಗಳು ಪತ್ತೆಯಾಗಿಲ್ಲ.
ತಮ್ಮ ತಂಡದ ಸದಸ್ಯರ ಸಹಯೋಗದಲ್ಲಿ ಈಶ್ವರ ಮಲ್ಪೆ ಅವರು ಏಳು ಬಾರಿ ವೇಗವಾಗಿ ಹರಿಯುವ ಗಂಗಾವಳಿ ನದಿಯಲ್ಲಿ ಮುಳುಗಿದರು.
ಥರ್ಮಲ್ ಇಮೇಕ್ ಹಾಗೂ ಸುಧಾರಿತ‌ ಡ್ರೋಣ್ ತಂತ್ರಜ್ಞಾನದಿಂದ‌ ಗುರುತಿಸಿದ ನಾಲ್ಕೂ ಸ್ಥಳಗಳಲ್ಲೂ ಹುಡುಕಿದರೂ ಕಲ್ಲುಗಳು, ಮರದ ಅವಶೇಷಗಳು ಮಾತ್ರ ಕಂಡಿವೆ ಯಾವುದೇ ಲಾರಿಯ ಅವಶೇಷ ಸಿಕ್ಕಿಲ್ಲ ಎಂದು ಈಶ್ವರ ಮಲ್ಪೆ ತಿಳಿಸಿದ್ದಾರೆ.
ನದಿ ನೀರು ವೇಗವಾಗಿ ಹರಿಯುತ್ತಿರುವುದರಿಂದ ಈಶ್ವರ ಮಲ್ಪೆ ಒಮ್ಮೆ ತಾವು ಹಿಡಿದಿದ್ದ ಹಗ್ಗ ಬಿಟ್ಟು ತೇಲಿ‌ ಹೋದರು. ತಂಡದ ಒಬ್ಬ ಸದಸ್ಯ ಬಿದ್ದು ಗಾಯಗೊಂಡರೂ ಆದರೂ ಧೈರ್ಯದಿಂದ ತಂಡ ನಾಳೆಯೂ ತಮ್ಮ ಪ್ರಯತ್ನ ಮುಂದುವರಿಸುವುದಾಗಿ ತಿಳಿಸಿದೆ.
ಸ್ಕೂಬಾ ಸಿಲಿಂಡರ್ ಕಟ್ಟಿಕೊಂಡು ನಾನು ಹಗ್ಗ ಹಿಡಿದು ಕೆಳಗೆ ಹೋಗುತ್ತೇನೆ. ಹಗ್ಗದ ಮೂಲಕವೇ ತಂಡದ ಸದಸ್ಯರಿಗೆ ಸಂದೇಶ ರವಾನಿಸುತ್ತೇನೆ. ನಾಲ್ಕರಿಂದ‌ ಐದು ನಿಮಿಷದ ಒಳಗೆ ಮೇಲೆ ಬರುತ್ತೇನೆ ಎನ್ನುತ್ತಾರೆ ಈಶ್ವರ ಮಲ್ಪೆ.
ನದಿಯ ನೀರು ಸಂಪೂರ್ಣ ಕೆಂಪಾಗಿದೆ. ಕಣ್ಣು ಬಿಟ್ಟರೂ ನೀರಿನ ಒಳಗೆ ಏನೂ ಕಾಣದು. ಮೆಟಲ್ ಇದ್ದರೆ ಅಯಸ್ಕಾಂತದ ಮೂಲಕ ಗುರುತಿಸುತ್ತೇವೆ. ಉಳಿದ ವಸ್ತುಗಳನ್ನು ಸ್ಪರ್ಷ ಜ್ಞಾನದಿಂದಲೇ ಕಂಡು ಹಿಡಿಯುತ್ತೇನೆ. ದಕ್ಷಿಣ ಕನ್ನಡ, ಉಡುಪಿ, ಕೊಡಗು ಸೇರಿ ರಾಜ್ಯದ ವಿವಿಧೆಡೆ ಸಾಕಷ್ಟು ರಕ್ಷಣೆ ಮಾಡಿದ್ದೆನೆ. 100 ಅಡಿ ಆಳದವರೆಗೂ ಸ್ಕೂಬಾ ಡೈವ್ ಮಾಡಿದ ಉದಾಹರಣೆ ಇದೆ ಎನ್ನುತ್ತಾರೆ ಈಶ್ವರ ಮಲ್ಪೆ.

ಎಸ್ಪಿ ಎಂ ನಾರಾಯಣ, ಶಾಸಕ‌ ಸತೀಶ ಸೈಲ್ ಸಹ ನದಿಯ ನಡುವೆ ತೆರಳಿ ಕಾರ್ಯಾಚರಣೆ ವೀಕ್ಷಿಸಿದರು. ನಮ್ಮ ರಾಜ್ಯ ಸರ್ಕಾರದ ಮರ್ಯಾದೆ ಉಳಿಸುವ ಕವಾಬ್ದಾರಿ ನಿಮ್ಮ ಮೇಲಿದೆ ಎಂದು ಈಶ್ವರ ಅವರಲ್ಲಿ ಕೇಳಿಕೊಂಡರು.