ಕಾರವಾರ: ಶಿರೂರು ಗುಡ್ಡ ಕುಸಿತ ಘಟನೆ ನಡೆದು ತಿಂಗಳಾಗುತ್ತಿದೆ. ಆದರೆ, ಘಟನೆಯಲ್ಲಿ ನಾಪತ್ತೆಯಾದ ಜಗನ್ನಾಥ ನಾಯ್ಕ ಹಾಗೂ ಲೋಕೇಶ ನಾಯ್ಕ ಅವರ ಕುಟುಂಬ ಇದುವರೆಗೂ ಯಾವುದೇ ಪರಿಹಾರ ಸಹಕಾರ ಸಿಗದೇ ಕಣ್ಣೀರು ಹಾಕುತ್ತಿದೆ. ಈ ಇಬ್ಬರ ಶವ ಇದುವರೆಗೂ ಸಿಕ್ಕಿಲ್ಲ. ಇದರಿಂದ ಅವರ ಕುಟುಂಬಗಳಿಗೆ ಸರ್ಕಾರದಿಂದ ಘೋಷಣೆಯಾದ ತಲಾ 5 ಲಕ್ಷ ರೂ. ಪರಿಹಾರವೂ ದೊರಕಿಲ್ಲ. ಬಾಂಡ್ ಬರೆಸಿಕೊಂಡು ನಾಪತ್ತೆಯಾದವರಿಗೂ ಪರಿಹಾರ ಒದಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಭರವಸೆ ನೀಡಿದ್ದರು. ಆ ಭರವಸೆಯೂ ಈಡೇರಿಲ್ಲ.
ಜಗನ್ನಾಥ ನಾಯ್ಕ ಅವರ ಇಬ್ಬರು ಹೆಣ್ಣು ಮಕ್ಕಳಿಗೆ ಉದ್ಯೋಗ ಕೊಡಿಸುವುದಾಗಿ ಜಿಲ್ಲಾಡಳಿತ ಹೇಳಿತ್ತು. ಕುಮಟಾ ಎಸಿ ಕಚೇರಿಯಿಂದ ದಾಖಲೆಗಳನ್ನು ಪಡೆಯಲಾಗಿದೆ. ಆದರೆ, ಹೋಗಿ ಕೇಳಿದರೆ, ಬೇಕಾದಾಗ ನಿಮಗೆ ಹೇಳಿ ಕಳಿಸುತ್ತೇವೆ ಎಂದಷ್ಟೇ ಹೇಳಲಾಗುತ್ತಿದೆ ಯಾವುದೇ ಕೆಲಸಕ್ಕೆ ಕರೆ ಬಂದಿಲ್ಲ . ಎಂದು ಜಗನ್ನಾಥ ನಾಯ್ಕರ ಪುತ್ರಿ ಕೃತಿಕಾ ನೋವು ತೋಡಿಕೊಂಡರು.
ಇನ್ನು ಲೋಕೇಶ ನಾಯ್ಕ ಅವರ ತಾಯಿ ಮಾದೇವಿ ಅವರಿಗೆ ಸರಿಯಾಗಿ ಕಣ್ಣು ಕಾಣಿಸದು, ಅದಕ್ಕೆ ಚಿಕಿತ್ಸೆಯಾಗಬೇಕು. ಅವರ ಮಗ ಗೋವಾದಲ್ಲಿ ಉದ್ಯೋಗ ಮಾಡಿ, ತಾಯಿಗೆ ನೆರವಾಗುತ್ತಿದ್ದ. ಈಗ ಆತನೂ ಇಲ್ಲ. ಆದರೆ, ಯಾರೊಬ್ಬರೂ ಅವರ ಮನೆಗೆ ಹೋಗಿಯೂ ಕೇಳಿಲ್ಲ ಎಂದು ಮಾದೇವಿ ನಾಯ್ಕ ಗೋಳು ತೋಡಿಕೊಂಡರು.