ಜಿಲ್ಲೆ

ಮಳೆ ಹಾನಿಗೊಳಗಾದ ಮನೆಗಳಿಗೆ ದೊರಕದ ಪರಿಹಾರಧನ: ಶಿರ್ತಾಡಿ ಗ್ರಾಮಸಭೆಯಲ್ಲಿ ದೂರು

ಸೌಮ್ಯ ಆರ್

ಮೂಡುಬಿದಿರೆ: ಕಳೆದ ವರ್ಷದಲ್ಲಿ ಮಳೆ ಹಾನಿಗೊಳಗಾದ ಕೆಲವು ಮನೆಗಳಿಗೆ ಹಂತ-ಹಂತವಾಗಿ ಪರಿಹಾರಧನ ಸಿಗುವುದೆಂದು ಹೇಳಲಾಗಿದ್ದರೂ, ಇನ್ನೂ ಹಲವರಿಗೆ ಸಿಕ್ಕಿಲ್ಲ ಎಂದು ಶಿರ್ತಾಡಿ ಗ್ರಾಪಂ ಉಪಾಧ್ಯಕ್ಷೆ ಸಂತೋಷ್ ಕೋಟ್ಯಾನ್ ಹೇಳಿದರು.

ಶಿರ್ತಾಡಿ ಗ್ರಾಪಂ ಕಾರ್ಯಾಲಯದಲ್ಲಿ ಅಧ್ಯಕ್ಷೆ ಆಗ್ನೆಸ್ ಡಿಸೋಜ ಅಧ್ಯಕ್ಷತೆಯಲ್ಲಿ ಆಯೋಜಿಸಲಾದ 2025-26ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯಲ್ಲಿ ಈ ಕುರಿತು ಪ್ರಸ್ತಾಪಿಸಲಾಯಿತು. ಶೇ.16ಕ್ಕಿಂತ ಹೆಚ್ಚು ಹಾನಿ ಆಗಿದ್ದಲ್ಲಿ ಪರಿಹಾರ ತಕ್ಷಣ ಲಭಿಸುವ ಅವಕಾಶವಿದೆ ಎಂದು ಗ್ರಾಮ ಆಡಳಿತಾಧಿಕಾರಿ ಎಸ್.ಮಹೇಶ್ ಉತ್ತರಿಸಿದರು.

ಸತತ ಮೂರನೇ ಬಾರಿ ಗ್ರಾಮಸಭೆಗೆ ಕೃಷಿ ಇಲಾಖಾಧಿಕಾರಿಗಳು ಗೈರು ಹಾಜರಾಗಿರುವುದನ್ನು ಗ್ರಾಮಸ್ಥರು ಪ್ರಶ್ನಿಸಿದರು. ಗ್ರಾಮಸಭೆಯ ನೋಟಿಸನ್ನು ಇತರ ಇಲಾಖೆಗಳಂತೆ ಕೃಷಿ ಅಧಿಕಾರಿಗೂ ಕಳುಹಿಸುತ್ತೇವೆ ಪಿಡಿಒ ದಾಮೋದರ ತಿಳಿಸಿದರು. ಮೇಲಾಧಿಕಾರಿಗಳಿಗೆ ಈ ಕುರಿತು ಪತ್ರ ಬರೆಯುವುದೆಂದು ನಿರ್ಣಯಿಸಲಾಯಿತು.

ಶಿರ್ತಾಡಿಯ ಕುಕ್ಕುದಕಟ್ಟೆ, ಪಡುಕೊಣಾಜೆ, ಗುಂಡಾವು ಮೊದಲಾದೆಡೆ ವಿದ್ಯುತ್ ತಂತಿಗಳು ಜೋತಾಡುತ್ತಿರುವುದನ್ನು ಉಮೇಶ್ ನಾಯ್ಕ ಸಹಿತ ಗ್ರಾಮಸ್ಥರು ಪ್ರಸ್ತಾಪಿಸಿದಾಗ ಮೆಸ್ಕಾಂ ಬೆಳುವಾಯಿ ಎಸ್.ಒ.ಗೇಮಾ ನಾಯ್ಕ ಸ್ಥಳ ಪರಿವೀಕ್ಷಣೆಗೈದು ಕಂಬಗಳ ನಡುವೆ ಹೆಚ್ಚುವರಿ ಕಂಬ ಸ್ಥಾಪಿಸಲು ಕ್ರಮ ಜರುಗಿಸುವುದಾಗಿ ತಿಳಿಸಿದರು.

ಎಂಡೋಸಲ್ಫಾನ್ ಪೀಡಿತರನ್ನು ಇತರ ಸಾಮಾನ್ಯ ಅಂಗವಿಕಲರ ಪಟ್ಟಿಯಲ್ಲಿ ಪರಿಗಣಿಸಲಾಗುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಶಿರ್ತಾಡಿ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಭರತ್ ಸ್ಪಷ್ಟನೆ ನೀಡಿದರು. ಪಡುಕೊಣಾಜೆಗೆ ಗೋಶಾಲೆ ಮಂಜೂರಾಗಿದೆ ಎಂದು ಶಿರ್ತಾಡಿಯ ಹಿರಿಯ ಪಶು ವೈದ್ಯಾಧಿಕಾರಿ ಡಾ.ಮಲ್ಲಿಕಾರ್ಜುನ ಮಹೇಶ್ ತಿಳಿಸಿದರು.

ನೋಡಲ್ ಅಧಿಕಾರಿಯಾದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ ಕೆ.ಕಾರಿಗಿ, ಗ್ರಾಪಂ ಮಾಜಿ ಅಧ್ಯಕ್ಷೆ ಲತಾ ಹೆಗ್ಡೆ, ಸಂತೋಷ್ ಶೆಟ್ಟಿ, ದಿನೇಶ್ ಶೆಟ್ಟಿ ತಿಮಾರ್, ಶೀನ, ಸಂತೋಷ್ ಅಂಚನ್, ದೇವಕಿ, ಸುರೇಖಾ, ನಾಗವೇಣಿ, ಶಶಿಕಲಾ ಚರ್ಚೆಯಲ್ಲಿ ಪಾಲ್ಗೊಂಡರು. ಗ್ರಂಥಪಾಲಕ ಜಗದೀಶ ಭಟ್ ಸ್ವಾಗತಿಸಿ, ನಿರೂಪಿಸಿದರು.