ಜಿಲ್ಲೆ

ಶಿರಾಡಿ ಘಾಟಿ 24 ಗಂಟೆ ಸಂಚಾರಕ್ಕೆ ಮುಕ್ತ

Avinash R

ಮಂಗಳೂರು: ಬೆಂಗಳೂರು-ಮಂಗಳೂರು ಸಂಪರ್ಕಿಸುವ ಶಿರಾಡಿ ಘಾಟಿ ಬಳಿ ಭೂಕುಸಿತ ಪ್ರದೇಶದ ಮಣ್ಣು ತೆರವು ಕಾಮಗಾರಿ ಪೂರ್ಣಗೊಂಡಿದ್ದು, ಈ ಮಾರ್ಗದಲ್ಲಿ ದಿನದ 24 ಗಂಟೆ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಶನಿವಾರ ರಾತ್ರಿಯೇ ಕೆಲ ವಾಹನಗಳಿಗೆ ಈ ಮಾರ್ಗದಲ್ಲಿ ಸಂಚರಿಸಲು ಅವಕಾಶ ಒದಗಿಸಲಾಗಿದ್ದು, ಭಾನುವಾರ ರಾತ್ರಿಯಿಂದ ಪೂರ್ಣ ಪ್ರಮಾಣದಲ್ಲಿ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ಉನ್ನತ ಅಧಿಕಾರಿಗಳು ದೃಢಪಡಿಸಿದ್ದಾರೆ.

ಸಹಜ ಸ್ಥಿತಿಗೆ ಮರಳುತ್ತಿರುವ ರಾಜಧಾನಿ ಸಂಪರ್ಕ

ಭೂಕುಸಿತ ಬಳಿಕ ಶಿರಾಡಿ ಘಾಟಿ ಪ್ರದೇಶದಲ್ಲಿ ಬೆಳಗ್ಗೆ 6ರಿಂದ ರಾತ್ರಿ 6ರ ತನಕ ಮಾತ್ರ ವಾಹನಗಳ ಪ್ರಯಾಣಕ್ಕೆ ಅವಕಾಶ ನೀಡಲಾಗಿತ್ತು. ರಾತ್ರಿ ಮಂಗಳೂರಿನಿಂದ ಹೊರಟ ಬಸ್‌ಗಳು ಗುಂಡ್ಯ ಭಾಗದಲ್ಲಿ ಹಾಗೂ ಬೆಂಗಳೂರಿನಿಂದ ಹೊರಟ ಬಸ್ ಸಕಲೇಶಪುರದಲ್ಲಿ ಸುಮಾರು 2.30 ತಾಸು ಕಾಯುವ ಪರಿಸ್ಥಿತಿ ಇತ್ತು. ಈ ಸಮಸ್ಯೆ ಸದ್ಯ ನಿವಾರಣೆಯಾಗಿದೆ.

ಮಂಗಳೂರು-ಬೆಳ್ತಂಗಡಿ-ಚಾರ್ಮಾಡಿ-ಹಾಸನ-ಬೆಂಗಳೂರು ಮಾರ್ಗದಲ್ಲಿ ದಿನದ 24 ಗಂಟೆ ಪ್ರಯಾಣಿಸಲು ಅವಕಾಶವಿದ್ದರೂ, ಈ ಮಾರ್ಗ ದುರ್ಗಮವಾಗಿದೆ. ಕೆಎಸ್ಸಾರ್ಟಿಸಿ ರಾಜಹಂಸ ಮತ್ತು ಕರ್ನಾಟಕ ಸಾರಿಗೆ ಬಸ್‌ಗಳು ಮಾತ್ರ ಸಂಚರಿಸುತ್ತಿವೆ.