ಬೆಂಗಳೂರು:ತಾಂತ್ರಿಕ ದೋಷದಿಂದ ಗೂಡ್ಸ್ ರೈಲು ಕೆಟ್ಟು ನಿಂತ ಕಾರಣ ನಿಗದಿತ ಸಮಯಕ್ಕೆ ಮೈಸೂರುನಿಂದ ಬೆಂಗಳೂರಿಗೆ ತೆರಳಬೇಕಿದ್ದ ಶತಾಬ್ದಿ ಎಕ್ಸ್ಪ್ರೆಸ್ ಸೇರಿ ಮೂರು ರೈಲುಗಳು 2 ಗಂಟೆ ತಡವಾಗಿ ಆಗಮಿಸಿದ್ದ ಘಟನೆ ಬುಧವಾರ ನಡೆಯಿತು.
ಮೈಸೂರು ಜಂಕ್ಷನ್ನಿಂದ ಮಧ್ಯಾಹ್ನ 2.15ಕ್ಕೆ ಹೊರಟಿದ್ದ ಶತಾಬ್ದಿ ಎಕ್ಸ್ಪ್ರೆಸ್,4.10ಕ್ಕೆ "ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ರೈಲು ನಿಲ್ದಾಣಕ್ಕೆ ತಲುಪಬೇಕಿತ್ತು. ಆದರೆ, ಗೂಡ್ಸ್ ರೈಲು ಕೆಟ್ಟು ನಿಂತಿದ್ದರಿಂದ ಹೆಜ್ಜಾಲ ರೈಲು ನಿಲ್ದಾಣದಲ್ಲಿ ಶತಾಬ್ದಿ ಎಕ್ಸ್ಪ್ರೆಸ್, ಸತತ ಒಂದೂವರೆ ಗಂಟೆ ಕಾಲ ನಿಂತಿತ್ತು. ಇದರಿಂದಾಗಿ ಬೇರೆ ಕಡೆ ತೆರಳಬೇಕಿದ್ದ ಪ್ರಯಾಣಿಕರು ತೊಂದರೆಗೆ ಸಿಲುಕಿದ್ದರು. ಕೆಲವರು ಅರ್ಧ ದಾರಿಯಲ್ಲೇ ಇಳಿದು ತಾತ್ಕಾಲಿಕವಾಗಿ ಕ್ಯಾಬ್ ಮಾಡಿಕೊಂಡು ಗಮ್ಯ ಸ್ಥಳಕ್ಕೆ ತಲುಪಿದರು.
ಇನ್ನೂ ಕೆಲವರು ರೈಲ್ವೆ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಂತಿಮವಾಗಿ ಈ ರೈಲು ಕ್ರಾಂತಿವೀರ 6.15ಕ್ಕೆ ಸಂಗೊಳ್ಳಿ ರಾಯಣ್ಣ' ರೈಲು ನಿಲ್ದಾಣಕ್ಕೆ ತಲುಪಿತ್ತು. ಬೆಂಗಳೂರುನಿಂದ ಚೆನ್ನೈಗೆ ತೆರಳಲು ಶತಾಬ್ದಿ ಎಕ್ಸ್ಪ್ರೆಸ್ಗಾಗಿ ಕಾಯುತ್ತಿದ್ದ ನೂರಾರು ಪ್ರಯಾಣಿಕರು ರೈಲು ನಿಲ್ದಾಣದಲ್ಲಿ ತೊಂದರೆಗೆ ಸಿಲುಕಿದ್ದರು. ಅಲ್ಲದೆ, ರಾಜ್ಯರಾಣಿ ಎಕ್ಸ್ಪ್ರೆಸ್, ಕಾಚಿಗುಡ ಎಕ್ಸ್ಪ್ರೆಸ್ ಸೇರಿ ಇತರೆ ರೈಲುಗಳ ಸಹ ನಿಗದಿತ ಸಮಯದ ಬದಲು ಒಂದು ಗಂಟೆ ಕಾಲ ವಿಳಂಬವಾಗಿ ನಿಲ್ದಾಣಕ್ಕೆ ಆಗಮಿಸಿದ್ದವು.
ವೈಯಕ್ತಿಕ ಕೆಲಸಕ್ಕಾಗಿ ಬೆಂಗಳೂರಿಗೆ ತೆರಳಲು ಟಿಕೆಟ್ ಬುಕ್ ಮಾಡಿ ಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಪ್ರಯಾಣಿಸುತ್ತಿದ್ದೆ. ಆದರೆ, ಹೆಜ್ಜಾಲ ರೈಲು ನಿಲ್ದಾಣದಲ್ಲಿ ಈ ರೈಲು ಒಂದೂವರೆ ಗಂಟೆ ನಿಂತಿದ್ದರಿಂದ ನಿಗದಿತ ಸಮಯಕ್ಕೆ ತೆರಳಲು ನಮಗೆ ಸಾಧ್ಯವಾಗಲಿಲ್ಲ. ಈ ಬಗ್ಗೆ ಯಾರನ್ನೂ ಕೇಳಬೇಕು ಎಂಬುದರ ಬಗ್ಗೆ ಗೊತ್ತಿಲ್ಲ. ತಡವಾಗಿ ಬೆಂಗಳೂರು ರೈಲು ನಿಲ್ದಾಣಕ್ಕೆ ಬಂತು. ಕೆಲ ಪ್ರಯಾಣಿಕರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತೆರಳಬೇಕಿತ್ತು. ಅವರಿಗೂ ತೊಂದರೆಯಾಯಿತು.
|ಸತೀಶ್, ಪ್ರಯಾಣಿಕ.