ಬೆಂಗಳೂರು: ರಾಜ್ಯ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್ ಅವರ ಅಧಿಕಾರಾವಧಿ ಜುಲೈ 31ಕ್ಕೆ ಮುಕ್ತಾಯವಾಗಲಿದ್ದು, ರಜನೀಶ್ ಪತ್ನಿ ಶಾಲಿನಿ ರಜನೀಶ್ ಅವರು ಮುಂದಿನ ನೂತನ ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿಯಾಗಲಿದ್ದಾರೆ.
ಇಂದು (ಜುಲೈ 26) ನಡೆದ ಸಚಿವ ಸಂಪುಟದಲ್ಲಿ ಶಾಲಿನಿ ರಜನೀಶ್ರನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನಾಗಿ ಆಗಿ ಮಾಡಲು ತೀರ್ಮಾನಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಸಚಿವ ಎಚ್.ಕೆ. ಪಾಟೀಲ್ ಅವರು ಶಾಲಿನಿ ರಜನೀಶ್ ಅವರ ನೇಮಕದ ಕುರಿತು ಮಾಹಿತಿ ನೀಡಿದರು.
ರಾಜ್ಯ ಸಂಪುಟ ಸಭೆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಸಚಿವ ಎಚ್ಕೆ ಪಾಟೀಲ್ ಅವರು, ಹಾಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರು ಇನ್ನು ಐದು ದಿನದಲ್ಲಿ ನಿವೃತ್ತಿಯಾಗಲಿದ್ದಾರೆ. ಇದರಿಂದ ನೂತನ ಸಿಎಸ್ ಆಗಿ ಶಾಲಿನಿ ರಜನೀಶ್ರನ್ನು ನೇಮಿಸಲು ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಶಾಲಿನಿ ರಜನೀಶ್ ಅವರು ಈಗ ಅಭಿವೃದ್ಧಿ ಆಯುಕ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಜ್ಯೇಷ್ಠತೆಯ ಆಧಾರದ ಮೇಲೆ ಮುಂಬಡ್ತಿ ನೀಡಲಾಗಿದೆ. ರಜನೀಶ್ ಗೋಯಲ್ ಅವರ ನಂತರ ಜ್ಯೇಷ್ಠತೆಯ ಆಧಾರದ ಮೇಲೆ ರೇಸ್‌ನಲ್ಲಿ ಕೇಂದ್ರ ಹಣಕಾಸು ಸಚಿವಾಲಯದ ಕಾರ್ಯದರ್ಶಿ ಅಜಯ್ ಸೇಠ್ ಹಾಗೂ ಶಾಲಿನಿ ರಜನೀಶ್ ಅವರಿದ್ದರು. ಈಗ ರಾಜ್ಯ ಸರ್ಕಾರ ಶಾಲಿನಿ ರಜನೀಶ್ ಅವರಿಗೇ ಮಣೆ ಹಾಕಿದೆ. 2027ರ ಜೂನ್‌ಗೆ ಇವರು ನಿವೃತ್ತಿ ಹೊಂದಲಿದ್ದಾರೆ.
ಅಜಯ್ ಸೇಠ್ ಅವರು ಇನ್ನು 11 ತಿಂಗಳು ಮಾತ್ರ ಅಧಿಕಾರದಲ್ಲಿ ಇರುವುದರಿಂದ ರಾಜ್ಯ ಸರ್ಕಾರವು ಶಾಲಿನಿ ರಜನೀಶ್ ಅವರನ್ನು ನೇಮಕ ಮಾಡಿದೆ ಎಂದು ತಿಳಿದುಬಂದಿದೆ. ಇದರೊಂದಿಗೆ ರಾಜ್ಯ ಮುಖ್ಯ ಕಾರ್ಯದರ್ಶಿಯಾಗಿ ನೇಮಕಗೊಂಡ ದ್ವಿತೀಯ ದಂಪತಿ ಎಂಬ ಖ್ಯಾತಿಗೆ ಶಾಲಿನಿ ರಜನೀಶ್ ಹಾಗೂ ರಜನೀಶ್ ಗೋಯಲ್ ಪಾತ್ರರಾದರು. ಇದಕ್ಕೂ ಮೊದಲು ಬಿ.ಕೆ.ಭಟ್ಟಾಚಾರ್ಯ ಹಾಗೂ ತೆರೇಸಾ ಭಟ್ಟಾಚಾರ್ಯ ದಂಪತಿಯು ರಾಜ್ಯ ಮುಖ್ಯ ಕಾರ್ಯದರ್ಶಿಯಾಗಿದ್ದರು.