ಜಿಲ್ಲೆ

ಬಿಬಿಎಂಪಿ ಲೆಕ್ಕಾಧೀಕ್ಷಕಿಗೆ ಲೈಂಗಿಕ ಕಿರುಕುಳ

ಬೆಂಗಳೂರು: ಗುತ್ತಿಗೆ ಬಿಲ್​ಗಳನ್ನು ಅಕ್ರಮವಾಗಿ ಮಂಜೂರು ಮಾಡಿಸಿಕೊಳ್ಳುವ ದುರುದ್ದೇಶದಿಂದ ತನ್ನ ಫೋಟೋಗಳನ್ನು ಮಾರ್ಪಡಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಮೂವರು ಗುತ್ತಿಗೆದಾರರ ವಿರುದ್ಧ ಬಿಬಿಎಂಪಿ ಲೆಕ್ಕಾಧೀಕ್ಷಕಿ ಬಸವನಗುಡಿ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.

ಗುತ್ತಿಗೆದಾರರಾದ ಗಿರೀಶ್, ಪ್ರಮೋದ್, ಅಜಯ್ ಎಂಬುವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳು ಕೆಲಸದ ನಿಮಿತ್ತ ಕಚೇರಿಗೆ ಬರುತ್ತಿದ್ದರು. ಉತ್ತಮ ಸ್ನೇಹಿತರಂತೆ ಮಾತನಾಡಿ ಫೋಟೋಗಳನ್ನು ಮೊಬೈಲ್​ನಲ್ಲಿ ತೆಗೆದುಕೊಂಡಿದ್ದರು.

ಗುತ್ತಿಗೆ ಬಿಲ್​ಗಳನ್ನು ಪಾಸ್ ಮಾಡದಿದ್ದರೆ ನಿಮ್ಮ ಜತೆಯಲ್ಲಿ ಈ ಹಿಂದೆ ತೆಗೆದ ಫೋಟೊಗಳನ್ನು ಅಸಹ್ಯಕರವಾಗಿ ಮಾರ್ಪಡಿಸುವುದಾಗಿ ಬೆದರಿಕೆ ಒಡ್ಡಿದ್ದರು. ಅಲ್ಲದೆ, ಗಿರೀಶ್​ಗೂ ತನಗೂ ಅಕ್ರಮ ಸಂಬಂಧವಿದೆ ಎಂಬ ರೀತಿ ಫೋಟೋ ಮಾರ್ಪಡಿಸಿದ್ದಾರೆ ಎಂದು ಲೆಕ್ಕಾಧೀಕ್ಷಕಿ ದೂರಿದ್ದಾರೆ. ದಾಖಲೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.