ಜಿಲ್ಲೆ

ಸ್ವಾವಲಂಬಿ ಬದುಕಿಗೆ ನೆರವು : ಪಟ್ಲ ಸತೀಶ್ ಶೆಟ್ಟಿ ಶ್ಲಾಘನೆ ಹೊಲಿಗೆ ಯಂತ್ರ, ಸಹಾಯಧನ ವಿತರಣೆ

ಮೂಲ್ಕಿ: ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಾಯ ನೀಡುವ ಕಾರ್ಯ ಸ್ಮರಣೀಯ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಹೇಳಿದರು.

ಮಂಗಳವಾರ ಮೂಲ್ಕಿ ಅರಮನೆ ಧರ್ಮ ಚಾವಡಿಯಲ್ಲಿ ಮೂಲ್ಕಿ ಅರಮನೆ, ಚಾರಿಟೆಬಲ್ ಟ್ರಸ್ಟ್ ವತಿಯಿಂದ ಅರಸು ಸ್ವಾವಲಂಬಿ ಯೋಜನೆಯಡಿಯಲ್ಲಿ ಅಶಕ್ತ ನಿರುದ್ಯೋಗಿ ಮಹಿಳಾ ಪಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಣೆ ಹಾಗೂ ಅರಸು ಶಿಕ್ಷಣ ಸಮೃದ್ಧಿ ಯೋಜನೆಯಡಿಯಲ್ಲಿ ಅಸಹಾಯಕ ಮಹಿಳೆಯರಿಗೆ ಸಹಾಯಧನ ವಿತರಣೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು .

ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ಅಧ್ಯಕ್ಷತೆ ವಹಿಸಿ, ಟ್ರಸ್ಟ್ ವತಿಯಿಂದ ಧಾರ್ಮಿಕ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸುವ ಕಾರ್ಯ ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸಹಾಯ ಕಾರ್ಯ ನಿರಂತರವಾಗಿ ನಡೆಯುತ್ತಿರುವುದು ಸಂತಸ ತಂದಿದೆ ಎಂದರು.

ಐಕಳ ಗ್ರಾಪಂ ಸದಸ್ಯೆ ರೇಖಾ ಶೆಟ್ಟಿ, ಮೂಲ್ಕಿ ಪೊಲೀಸ್ ಠಾಣೆ ನಿರೀಕ್ಷಕ ಮಂಜುನಾಥ್ ಬಿ ಎಸ್., ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ವಸಂತ್ ಬೆರ್ನಾಡ್, ಮೂಲ್ಕಿ ಅರಮನೆ, ಚಾರಿಟೆಬಲ್ ಟ್ರಸ್ಟ್‌ನ ನಿರ್ದೇಶಕ ಗೌತಮ್ ಜೈನ್, ವಕೀಲರಾದ ಚಂದ್ರಶೇಖರ್ ಜಿ., ವಿನೋದ್ ಸಾಲ್ಯಾನ್ ಬೆಳ್ಳಾಯರು ಉಪಸ್ಥಿತರಿದ್ದರು.