ರಾಯಚೂರು ನಗರದ 10ಕ್ಕೂ ಹೆಚ್ಚು ಬಡಾವಣೆಗಳಿಗೆ ನೀರು ಪೂರೈಕೆ ಮಾಡುವ ರಾಂಪುರ ಜಲಾಶಯ ನೀರಿಲ್ಲದೆ ಬರಿದಾಗಿದೆ. 
ಜಿಲ್ಲೆ

ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ತೀವ್ರ ಸಂಕಷ್ಟ

ರುದ್ರಪ್ಪ ವಾಲಿ

ರಾಯಚೂರು: ಬೇಸಿಗೆ ಆರಂಭಕ್ಕೆ ಮುಂಚೆ ತುಂಬಿಸಿದ್ದ ಕುಡಿಯುವ ನೀರಿನ ಕೆರೆಗಳಲ್ಲಿ ನೀರು ಖಾಲಿಯಾಗಿದ್ದು, ಜಿಲ್ಲೆಯ ಕುಡಿಯುವ ನೀರಿಗಾಗಿ ಕಾಲುವೆ ನೀರಿನ ಮೇಲೆ ಅವಲಂಬಿತ ಹಳ್ಳಿಗಳಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಿದೆ.

ರಾಯಚೂರು ನಗರಕ್ಕೆ ನೀರು ಪೂರೈಕೆಗೆ ಆಧಾರವಾಗಿದ್ದ ಗಣೇಕಲ್ ಮತ್ತು ರಾಂಪುರ ಜಲಾಶಯಗಳು ಸಂಪೂರ್ಣ ಖಾಲಿಯಾಗಿದ್ದು, ನಗರದ 10ಕ್ಕೂ ಹೆಚ್ಚು ಬಡಾವಣೆಗಳಲ್ಲಿ 10 ದಿನಗಳಿಂದ ಸಮರ್ಪಕವಾಗಿ ನೀರು ಸರಬರಾಜಾಗುತ್ತಿಲ್ಲ. ಜಲಾಶಯದಿಂದ ನೀರು ಹರಿಸಲು ಸೂಚನೆ ನೀಡಲಾಗಿದ್ದರೂ ಕೆರೆಗಳಿಗೆ ನೀರು ತಲುಪಲು ವಿಳಂಬವಾಗಲಿದೆ.

ನಗರದ 35 ವಾರ್ಡ್‌ಗಳಲ್ಲಿ 25 ವಾರ್ಡ್‌ಗಳಿಗೆ ಕೃಷ್ಣಾ ನದಿಯಿಂದ ನೀರು ಪೂರೈಕೆ ಮಾಡಲಾಗುತ್ತಿದ್ದು, ಉಳಿದ 10 ವಾರ್ಡ್‌ಗಳಿಗೆ ರಾಂಪುರ ಜಲಾಶಯದಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ರಾಂಪುರ ಜಲಾಶಯದಲ್ಲಿ ನೀರಿನ ಲಭ್ಯತೆ ಕಡಿಮೆಯಿದ್ದ ಕಾರಣ ಮುರ‌್ನಾಲ್ಕು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ.

ಗಣೇಕಲ್ ಜಲಾಶಯದಲ್ಲಿಯೂ ನೀರು ಕಡಿಮೆಯಾಗಿರುವುದರಿಂದ ಅಲ್ಲಿನ ರಾಂಪುರ ಜಲಾಶಯಕ್ಕೆ ನೀರು ಹರಿಸಲು ಸಾಧ್ಯವಾಗದಂತಾಗಿದೆ. ಹೀಗಾಗಿ ಜನರು ಕುಡಿಯುವ ನೀರಿಗಾಗಿ ಕೊಳವೆಬಾವಿಗಳ ಮೇಲೆ ಅವಲಂಬಿತರಾಗುವಂತಾಗಿದ್ದು, ಕಾಲುವೆಯಿಂದ ಕೆರೆ ತುಂಬಿಸುವವರೆಗೆ ಜನರಿಗೆ ಸಂಕಷ್ಟ ತಪ್ಪಿದ್ದಲ್ಲ.

ಕೃಷ್ಣಾ ನದಿಯಿಂದ ನೀರು ಸರಬರಾಜು ಮಾಡಲಾಗುವ ಬಡಾವಣೆಗಳಲ್ಲಿಯೂ ನಿರ್ವಹಣೆ ಸಮಸ್ಯೆಯಿಂದ ದಿನ ಬಿಟ್ಟು ದಿನ ನೀರು ಹರಿಸಲಾಗುತ್ತಿದ್ದು, ಕೃಷ್ಣಾ ನದಿಯಲ್ಲಿಯೂ ಮಳೆಯಾಗದಿರುವುದರಿಂದ ನೀರಿನ ಹರಿವು ಕಡಿಮೆಯಿರುವುದರಿಂದ ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ.
ಜಿಲ್ಲೆಯ ಕಾಲುವೆ ನೀರಿನ ಮೇಲೆ ಅವಲಂಬಿತ 150ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಪರದಾಡುವಂತಾಗಿದೆ. ಸಿಂಧನೂರು ನಗರದಲ್ಲಿ ಕೆರೆ ಖಾಲಿಯಾಗಿರುವುದರಿಂದ ವಾರಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದ್ದು, ಮಾನ್ವಿಯಲ್ಲಿ ಮುರ‌್ನಾಲ್ಕು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ.

ನದಿ ಪಾತ್ರದ ಹಳ್ಳಿಗಳಲ್ಲಿಯೂ ನೀರಿನ ಸಮಸ್ಯೆ ಉದ್ಭವವಾಗಿದ್ದು, ತುಂಗಭದ್ರಾ ನದಿ ಪಾತ್ರದ ಹಳ್ಳಿಗಳಲ್ಲಿ ಸಮಸ್ಯೆ ತಲೆದೊರಿದೆ. ನದಿಯಲ್ಲಿ ನೀರಿನ ಹರಿವು ಕ್ಷೀಣವಾಗಿರುವುದರಿಂದ ನದಿಪಾತ್ರದ ಜನರೇ ನದಿಗೆ ತೆರಳಿ ನೀರು ತರುವಂತಹ ಸ್ಥಿತಿ ಎದುರಾಗಿದೆ.
ಜಿಲ್ಲಾಡಳಿತ ಬೇಸಿಗೆ ಆರಂಭಕ್ಕೆ ಮುಂಚೆ ಕುಡಿಯುವ ನೀರಿನ ಸಮಸ್ಯಾತ್ಮಕ ಹಳ್ಳಿಗಳನ್ನು ಗುರುತಿಸಿ ನೀರು ಸರಬರಾಜಿಗೆ ಕ್ರಮಕೈಗೊಂಡಿದ್ದರೂ ಅದನ್ನು ಸಮರ್ಪಕ ರೀತಿಯಲ್ಲಿ ಅನುಷ್ಠಾನ ಮಾಡುವಲ್ಲಿ ವಿಫಲವಾಗಿರುವುದರಿಂದ ನೀರಿಗಾಗಿ ಜನರು ಸಂಕಷ್ಟ ಎದುರಿಸುವಂತಾಗಿದೆ.

ಕೆರೆ ತುಂಬಿಸುವ ಸವಾಲು

ಜಿಲ್ಲೆಯಲ್ಲಿನ ಬರಿದಾಗಿರುವ ಕುಡಿಯುವ ನೀರಿನ ಕೆರೆಗಳನ್ನು ತುಂಬಿಸುವುದು ಜಿಲ್ಲಾಡಳಿತಕ್ಕೆ ಸವಾಲಾಗಿದೆ. ಪ್ರಮುಖವಾಗಿ ತುಂಗಭದ್ರಾ ಎಡದಂಡೆ ಕಾಲುವೆ ಮೂಲಕ ಕೆರೆಗಳಿಗೆ ನೀರು ಹರಿಸಲಾಗುತ್ತಿದ್ದು, ಕಾಲುವೆ ದುರಸ್ತಿ ಕಾರ್ಯ ಹಿನ್ನೆಲೆ ಕಾಲುವೆಗೆ ನೀರು ಹರಿಸಲು ಸಮಸ್ಯೆಯಾಗಿದೆ. ತುಂಗಭದ್ರಾ ಜಲಾಶಯದಲ್ಲಿಯೂ ನೀರಿನ ಪ್ರಮಾಣ ಕಡಿಮೆಯಿರುವುದರಿಂದ ಕೆರೆಗಳನ್ನು ತುಂಬಿಸಲು ಕಾಲುವೆಗೆ ನೀರು ಹರಿಸಬೇಕಾಗಿದೆ. ಕಾಲುವೆ ದುರಸ್ತಿ ಕಾರ್ಯ ನಿಲ್ಲಿಸಿ ನೀರು ಹರಿಸಿದರೂ ಸಮಸ್ಯೆಯಾಗಲಿದ್ದು, ಮಳೆ ಆರಂಭವಾದಲ್ಲಿ ದುರಸ್ತಿ ಕಾರ್ಯಕ್ಕೆ ಅಡ್ಡಿಯುಂಟಾಗಲಿದೆ ಎನ್ನುವ ಆತಂಕ ಅಧಿಕಾರಿಗಳಲ್ಲಿದೆ.

ಕಾಲುವೆಗೆ ನೀರು ಹರಿಸಲು ಆದೇಶ

ಜಲಾಶಯದಿಂದ ಕಾಲುವೆಗೆ ನೀರು ಹರಿಸಿ ಕುಡಿಯುವ ನೀರಿನ ಕೆರೆಗಳನ್ನು ತುಂಬಿಸಲು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಈಗಾಗಲೇ ಆದೇಶ ಹೊರಡಿಸಿದ್ದಾರೆ. ಪ್ರಮುಖವಾಗಿ ಗಣೇಕಲ್ ಮತ್ತು ರಾಂಪುರ ಜಲಾಶಯ ಸೇರಿದಂತೆ ಇನ್ನಿತರ ಕೆರೆಗಳಿಗೆ ನೀರು ತುಂಬಿಸಲು ಜಲಾಶಯದಿಂದ ನೀರು ಹರಿಸಲಾಗುತ್ತಿದೆ. ಆದರೆ ಪ್ರಸ್ತುತ ಕಾಲುವೆಗೆ ನೀರು ಹರಿಸಿದರೂ ರಾಂಪುರ ಜಲಾಶಯಕ್ಕೆ ಬಂದು ತಲುಪಲು ನಾಲ್ಕೈದು ದಿನಗಳಾದರೂ ಬೇಕಾಗಲಿದ್ದು, ಕಾಲುವೆ ಮೇಲ್ಭಾಗದ ಕೆರೆಗಳನ್ನು ತುಂಬಿಸಿದ ನಂತರ ರಾಂಪುರ ಜಲಾಶಯಕ್ಕೆ ನೀರು ಹರಿದು ಬರಲಿದೆ. ಜಿಲ್ಲಾಡಳಿತ ಕೆರೆ ತುಂಬಿಸಲು ಕಾಲುವೆ ನೀರು ಹರಿಸುವ ನಿರ್ಧಾರವನ್ನು ವಾರದ ಹಿಂದೆ ತೆಗೆದುಕೊಂಡಿದ್ದರೆ ಉತ್ತಮ ನಿರ್ಧಾರವಾಗುತ್ತಿತ್ತು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

ರಾಂಪುರ ಜಲಾಶಯದಲ್ಲಿ ನೀರು ಖಾಲಿಯಾಗಿರುವುದರಿಂದ ನಗರದ ಹಲವು ಬಡಾವಣೆಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಜಿಲ್ಲಾಧಿಕಾರಿಗಳು ಈಗಾಗಲೇ ರಾಂಪುರ ಜಲಾಶಯ ತುಂಬಿಸಲು ಕಾಲುವೆಗೆ ನೀರು ಹರಿಸಲು ಸೂಚನೆ ನೀಡಿದ್ದು, ಕಾಲುವೆಯಿಂದ ಕೆರೆಗೆ ನೀರು ಬಂದಲ್ಲಿ ಸಮಸ್ಯೆ ನಿವಾರಣೆಯಾಗಲಿದೆ.

ಡಾ.ಕೆ.ಗುರುಲಿಂಗಪ್ಪ ಪೌರಾಯುಕ್ತ, ನಗರಸಭೆ, ರಾಯಚೂರು.