ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಎರ್ಮಾಳು ತೆಂಕ ಸಂದು ದಾಂತಿ ಗರಡಿ ಮುಂಭಾಗ ಬುಧವಾರ ಸಂಜೆ ಎರಡು ಕಾರು ಮತ್ತು ಶಾಲಾ ವಾಹನದ ನಡುವೆ ನಡೆದ ಸರಣಿ ಅಪಘಾತದಲ್ಲಿ ಶಾಲಾ ಬಸ್ ಮಗುಚಿ ಬಿದ್ದು 3 ವಾಹನಗಳ ಚಾಲಕರು ಗಾಯಗೊಂಡಿದ್ದಾರೆ.
ಮಂಗಳೂರು ಕಡೆ ಸಾಗುತ್ತಿದ್ದ ಕಾರು ಮಹಿಳೆಗೆ ಡಿಕ್ಕಿ ಹೊಡೆದ ಬಳಿಕ ಉಡುಪಿ ಕಡೆ ಸಾಗುವ ಹೆದ್ದಾರಿ ಮಧ್ಯೆ ಪಲ್ಟಿಯಾಗಿದೆ. ಇದೇ ಸಂದರ್ಭ ಶಾಲಾ ವಿದ್ಯಾರ್ಥಿಗಳನ್ನು ಮನೆಗೆ ತಲುಪಿಸಿ, ಕಾಪು ಚಂದ್ರನಗರ ಕಡೆ ಸಾಗುತ್ತಿದ್ದ ಖಾಸಗಿ ಶಾಲಾ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಶಾಲಾ ವಾಹನ ಡಿವೈಡರ್ ದಾಟಿ ಮಂಗಳೂರು ಕಡೆ ಸಾಗುವ ಹೆದ್ದಾರಿಯಲ್ಲಿ ಮಗುಚಿ ಬಿದ್ದಿದೆ. ಈ ವೇಳೆ ಮಂಗಳೂರು ಕಡೆ ಸಾಗುತ್ತಿದ್ದ ಕಾರು ಮತ್ತೊಂದು ಕಾರಿಗೆ ಡಿಕ್ಕಿಯಾಗಿದೆ. ಅಪಘಾತ ಸಂಭವಿಸುವ ಸಮಯ ಶಾಲಾ ಬಸ್‌ನಲ್ಲಿ ವಿದ್ಯಾರ್ಥಿಗಳು ಇಲ್ಲದ ಕಾರಣ ಸಂಭಾವ್ಯ ಅಪಾಯ ತಪ್ಪಿದೆ. ಸ್ಥಳಕ್ಕೆ ಪಡುಬಿದ್ರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.