ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಜ್ಞಾನಾರ್ಜನೆ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿ ಸಮೂಹವನ್ನು ಸಮಗ್ರವಾಗಿ ತೊಡಗಿಸಿಕೊಳ್ಳುವ ಉದ್ದೇಶದೊಂದಿಗೆ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಬೋಧನಾ ತಂತ್ರಜ್ಞಾನದ ಬಳಕೆಯ ಸಾಧ್ಯತೆಗಳನ್ನು ವಿಸ್ತರಿಸಲಾಗುತ್ತಿದೆ ಎಂದು ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ವಿಶ್ವನಾಥ್ ಪಿ.ಹೇಳಿದರು.
ಗುರುವಾರ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ವಿಜ್ಞಾನ ಮತ್ತು ಮಾನವಿಕ ನಿಕಾಯಗಳ ವಿವಿಧ ವಿಭಾಗಗಳ ಬೋಧಕರಿಗಾಗಿ ಇಂಟರ‌್ಯಾಕ್ಟಿವ್ ಪೆನಲ್ ಡಿಸ್‌ಪ್ಲೇ ಬೋರ್ಡ್‌ನ ತಾಂತ್ರಿಕ ವಿಧಾನಗಳ ಕುರಿತು ಪ್ರಾಯೋಗಿಕ ತರಬೇತಿ ನೀಡಲು ಲೈಬ್ರರಿ ಆ್ಯಂಡ್ ಲರ್ನಿಂಗ್ ರಿಸೋರ್ಸಸ್ ಸಮಿತಿ ಆಯೋಜಿಸಿದ ಎರಡನೇ ಹಂತದ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್ ಮಾತನಾಡಿ, ಮಹತ್ವಾಕಾಂಕ್ಷಿ ಸದಾಶಯದಂತೆ ಇಂಟರ‌್ಯಾಕ್ಟಿವ್ ಪೆನಲ್ ಡಿಸ್‌ಪ್ಲೇ ಬೋರ್ಡ್‌ನ್ನು ಅಳವಡಿಸಿ ಯಶಸ್ವಿಯಾಗಿ ದೈನಂದಿನ ಬೋಧನೆಯಲ್ಲಿ ಪ್ರಯೋಗಿಸಲಾಗುತ್ತಿದೆ. ಇದರ ಪ್ರಯೋಜನವನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶದೊಂದಿಗೆ ಎಸ್.ಡಿ.ಎಂ ಸ್ನಾತಕೋತ್ತರ ಬೋಧಕರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ ಎಂದರು.
ಇಂಟರ‌್ಯಾಕ್ಟಿವ್ ಪೆನಲ್ ಡಿಸ್‌ಪ್ಲೇ ಬೋರ್ಡ್ ಅಳವಡಿಕೆಯ ನಂತರ ಸ್ನಾತಕೋತ್ತರ ವಿದ್ಯಾರ್ಥಿಗಳು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ತರಗತಿ ಬೋಧನೆಗಿಂತ ಭಿನ್ನ ಅನುಭವ ನೀಡುವ ಈ ತಂತ್ರಜ್ಞಾನ ವಿದ್ಯಾರ್ಥಿಗಳನ್ನು ಸಮಗ್ರವಾಗಿ ತೊಡಗಿಸಿಕೊಳ್ಳುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ಬೋಧನೆಯ ಗುಣಮಟ್ಟವನ್ನು ಹೆಚ್ಚಿಸುವಲ್ಲಿಯೂ ಇದು ಪರಿಣಾಮಕಾರಿ ಎನ್ನಿಸಿದೆ ಎಂದರು.
ಮುಂಬೈನ ಸೆನ್ಸಸ್ ಎಲೆಕ್ಟ್ರಾನಿಕ್ಸ್‌ನ ಪ್ರಾಡಕ್ಟ್ ಟ್ರೇನರ್ ಕಾರ್ತಿಕ್ ಮಾತನಾಡಿ, ನೂತನ ತಾಂತ್ರಿಕ ಬೋರ್ಡನ್ನು ಆಯಾ ಜ್ಞಾನಶಿಸ್ತುಗಳಿಗೆ ಸಂಬಂಧಿಸಿದ ಬೋಧನೆಯ ಅಗತ್ಯಗಳಿಗೆ ಅನುಗುಣವಾಗಿ ಹೇಗೆ ಬಳಸಿಕೊಳ್ಳಬಹುದು ಎಂಬ ಪ್ರಾಯೋಗಿಕ ಮಾಹಿತಿ ನೀಡಿದರು. ಲೈಬ್ರರಿ ಆ್ಯಂಡ್ ಲರ್ನಿಂಗ್ ರಿಸೋರ್ಸಸ್ ಸಮಿತಿಯ ಸಂಯೋಜಕರಾದ ಡಾ.ರಾಘವೇಂದ್ರ ಬೋಧಕರೊಂದಿಗಿನ ಸಂವಾದವನ್ನು ನಿರ್ವಹಿಸಿದರು.