ಗುರುಗುಂಟಾದ ವಾಸವಿ ಕಲ್ಯಾಣ ಮಂಟಪದಲ್ಲಿ ಶ್ರೀ ಕಮಲಜ್ಞಾನ ವಿಕಾಸ ಕೇಂದ್ರ ಹಮ್ಮಿಕೊಂಡ ಸ್ವ-ಉದ್ಯೋಗ ಪ್ರೇರಣಾ ಶಿಬಿರವನ್ನು ಗ್ರಾಪಂ ಸದಸ್ಯ ಆರ್.ಶರಣಬಸವ ಉದ್ಘಾಟಿಸಿದರು. ಒಕ್ಕೂಟದ ಅಧ್ಯಕ್ಷೆ ಪ್ರೇಮಾ, ಜ್ಯೋತಿ,ಅಲ್ಫೀಯಾ, ಆರ್.ವರ್ಮಾಲಕ್ಷ್ಮೀ ಮತ್ತಿತರರಿದ್ದರು. 
ಜಿಲ್ಲೆ

ಸ್ವಯಂ ಉದ್ಯೋಗ ಕೈಗೊಂಡು ಸಬಲರಾಗಿ

ರುದ್ರಪ್ಪ ವಾಲಿ

ಗುರುಗುಂಟಾ: ಮಕ್ಕಳು, ಮಹಿಳೆಯರು ಫಾಸ್ಟ್ ಫುಡ್ ನತ್ತ ವಾಲದೆ ಪೌಷ್ಟಿಕ ಆಹಾರ ಸೇವಿಸಿ ಆರೋಗ್ಯವಂತರಾಗಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಿಷನ್ ಶಕ್ತಿ ಯೋಜನೆಯ ತಜ್ಞೆ ಗಿರಿಜವ್ವ ಹೇಳಿದರು.

ಸ್ಥಳೀಯ ವಾಸವಿ ಕಲ್ಯಾಣ ಮಂಟಪದಲ್ಲಿ ಶ್ರೀ ಕಮಲಜ್ಞಾನ ವಿಕಾಸ ಕೇಂದ್ರದಿಂದ ಶನಿವಾರ ಹಮ್ಮಿಕೊಂಡ ಸ್ವ-ಉದ್ಯೋಗ ಪ್ರೇರಣಾ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ ರಕ್ತ ಹೀನತೆಯಿಂದ ಬಳಲುವವರ ಸಂಖ್ಯೆ ಹೆಚ್ಚಿದ್ದು, ಮಾನಸಿಕ ಖಿನ್ನತೆಗೊಳಗಾಗಿ ಕೌಟುಂಬಿಕ ದೌರ್ಜನ್ಯಗಳು,ಆತ್ಮಹತ್ಯೆಗಳು ನಡೆಯುತ್ತಿದ್ದು, ಇದು ಖೇದಕರ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು. ಆರೋಗ್ಯದೊಂದಿಗೆ ಶಿಕ್ಷಣವಂತರಾಗಿ ಸ್ವಯಂ ಉದ್ಯೋಗಗಳ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದರು.

ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ಉಪನ್ಯಾಸಕಿ ಶೈಲಜಾ ಮಾತನಾಡಿ, ನಮ್ಮ ಸಂಸ್ಥೆಯಿಂದ 64 ವಿಧದ ತರಬೇತಿ ನೀಡಲಾಗುತ್ತದೆ. ನಿಮ್ಮಲ್ಲಿನ ಜ್ಞಾನ, ಅನುಭವ, ಬಂಡವಾಳ ಹೂಡಿ ಸ್ವಯಂ ಉದ್ಯೋಗಗಳ ಮೂಲಕ ಸ್ವಾವಲಂಬಿಗಳಾಗಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಜ್ಞಾನವಿಕಾಸ ಸಮನ್ವಯ ಅಧಿಕಾರಿ ಗುರುಲಿಂಗಮ್ಮ,ವಲಯ ಮೇಲ್ವಿಚಾರಕ ರವಿಗಣೇಶ, ವಾಸವಿ ಯುವಜನ ಸಂಘದ ಅಧ್ಯಕ್ಷ ಆನಂದ ತುರ್ವಿಹಾಳ್ ಮಾತನಾಡಿದರು.