ಜಿಲ್ಲೆ

ಸುರಕ್ಷೆ ಬ್ಯಾರಿಕೇಡ್‌ಗಳೇ ಡೇಂಜರ್

ಇಂದಿರಾ ಎನ್ ಕೆ

ಹರಿಪ್ರಸಾದ್ ನಂದಳಿಕೆ ಕಾರ್ಕಳ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಾಲೆಗಳ ಸಮೀಪದ ಹೆದ್ದಾರಿಯಲ್ಲಿ ವಾಹನಗಳ ವೇಗ ನಿಯಂತ್ರಿಸಲು ಅಳವಡಿಸಿರುವ ಬ್ಯಾರಿಕೇಡ್‌ಗಳು ಇದೀಗ ವಾಹನ ಸವಾರರಿಗೆ ತೀವ್ರ ತಲೆನೋವಾಗಿ ಪರಿಣಮಿಸಿವೆ. ಬೆಳ್ಮಣ್ ಮುಖ್ಯಪೇಟೆ ಪ್ರದೇಶದಿಂದ ಕೆಲವೇ ಮೀಟರ್ ಅಂತರದಲ್ಲಿ ಚರ್ಚ್ ಬಳಿಯ ಹೆದ್ದಾರಿ ಪಕ್ಕದಲ್ಲಿರುವ ಶಾಲೆ ಸಮೀಪ ವಿದ್ಯಾರ್ಥಿಗಳು ಅತ್ತಿತ್ತ ಸಾಗುವ ಸಂದರ್ಭದಲ್ಲಿ ವಾಹನಗಳ ವೇಗಕ್ಕೆ ಬ್ರೇಕ್ ಹಾಕಲು 4 ಬ್ಯಾರಿಕೇಡ್‌ಗಳನ್ನು ಹೆದ್ದಾರಿಗೆ ಅಳವಡಿಸಲಾಗಿದೆ. ರಾತ್ರಿ ಸಮಯದಲ್ಲಿ ಈ ಬ್ಯಾರಿಕೇಡ್‌ಗಳನ್ನು ತೆರವು ಮಾಡದ ಕಾರಣ ವೇಗವಾಗಿ ಬರುವ ವಾಹನ ಸವಾರರಿಗೆ ಅಪಾಯ ತರುತ್ತಿವೆ. ಶಾಲಾ ಮಕ್ಕಳ ಸುರಕ್ಷತೆಗಾಗಿ ಹಾಕಲಾಗಿರುವ ಈ ಬ್ಯಾರಿಕೇಡ್‌ಗಳು ರಾತ್ರಿ ವೇಳೆಯಲ್ಲಿ ಸೂಕ್ತ ಬೆಳಕು, ಸೂಚನೆಗಳಿಲ್ಲದ ಕಾರಣ ಸಂಚಾರಕ್ಕೆ ಅಪಾಯಕಾರಿಯಾಗಿವೆ ಎನ್ನುವುದು ಸಾರ್ವಜನಿಕ ವಲಯದ ಆರೋಪವಾಗಿದೆ. ನಿಯಂತ್ರಣ ತಪ್ಪುವ ಚಾಲಕರು: ಕಾರ್ಕಳ- ಪಡುಬಿದ್ರೆ ರಾಜ್ಯ ಹೆದ್ದಾರಿ 1ರ ಬೆಳ್ಮಣ್ ಚರ್ಚ್ ಸಮೀಪದ ರಸ್ತೆಯು ನಿತ್ಯ ನೂರಾರು ವಾಹನಗಳ ಓಡಾಟಕ್ಕೆ ಸಾಕ್ಷಿಯಾಗಿದೆ. ಬೆಳಗ್ಗೆ, ಸಂಜೆ ಶಾಲಾ ಮಕ್ಕಳ ಸಂಚಾರ ಇರುವುದರಿಂದ, ವಾಹನಗಳ ವೇಗ ನಿಯಂತ್ರಿಸಲು ಈ ಭಾಗದಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಹಗಲು ಹೊತ್ತಿನಲ್ಲಿ ಇವು ವಾಹನ ಸವಾರರ ಗಮನಕ್ಕೆ ಬರುವುದರಿಂದ ಸಂಚಾರಕ್ಕೆ ತೊಂದರೆಯಾಗುವುದಿಲ್ಲ. ರಾತ್ರಿ ಸಮಯದಲ್ಲಿ ಬ್ಯಾರಿಕೇಡ್‌ಗಳಿಗೆ ಯಾವುದೇ ಪ್ರತಿಫಲಕ, ಬೆಳಕಿನ ವ್ಯವಸ್ಥೆ ಇಲ್ಲದೆ ದೂರದಿಂದ ಬರುವ ವಾಹನ ಚಾಲಕರಿಗೆ ಬ್ಯಾರಿಕೇಡ್ ಇದ್ದಕ್ಕಿದ್ದಂತೆ ಕಣ್ಣಿಗೆ ಬೀಳುತ್ತವೆ. ಇದು ವಾಹನ ಚಾಲಕರ ನಿಯಂತ್ರಣ ತಪ್ಪಲು ಕಾರಣವಾಗುವ ಸಾಧ್ಯತೆ ಇದೆ. ಹೀಗಾಗಿ ಈಗಾಗಲೇ ರಾತ್ರಿ ಸಂದರ್ಭದಲ್ಲಿ ಸಾಕಷ್ಟು ಬೈಕ್ ಸಹಿತ ಇತರ ವಾಹನ ಸವಾರರು ಎಡವಟ್ಟು ಮಾಡಿಕೊಂಡಿರುವ ನಿದರ್ಶನ ಸಾಕಷ್ಟಿವೆ. ರಾತ್ರಿ ವೇಳೆ ಹೆದ್ದಾರಿಯಲ್ಲಿ ವೇಗವಾಗಿ ಬರುವ ವಾಹನ ಸವಾರರು ಏಕಾಏಕಿ ಇದನ್ನು ನೋಡಿ ನಿಯಂತ್ರಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಈ ಸಮಸ್ಯೆಗೆ ಪರ್ಯಾಯವಾಗಿ ಸೂಕ್ತ ಸೂಚನಾ ಫಲಕ ಅಳವಡಿಸುವುದು ಅಥವಾ ಬ್ಯಾರಿಕೇಡ್‌ಗಳಿಗೆ ಪ್ರಕಾಶಮಾನವಾದ ಪ್ರತಿಫಲಕ ಅಳವಡಿಸುವುದು ಉತ್ತಮ ಎಂದು ಸಾರ್ವಜನಿಕರು ಸಲಹೆ ನೀಡಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ, ಶಾಲಾ ಆಡಳಿತ ಮಂಡಳಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ. ಶಾಲಾ ಮಕ್ಕಳ ಸುರಕ್ಷತೆಯ ಜತೆಗೆ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳಬೇಕಾದ ಜವಾಬ್ದಾರಿ ಆಡಳಿತದ ಮೇಲಿದೆ. ಈ ಕುರಿತು ಶೀಘ್ರವಾಗಿ ನಿರ್ಧಾರ ತೆಗೆದುಕೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಅಪಘಾತ ಸಂಭವಿಸುವ ಸಾಧ್ಯತೆ ಇದೆ ಎಂಬುದು ಸ್ಥಳೀಯರ ಆತಂಕವಾಗಿದೆ.

ಪರ್ಯಾಯ ವ್ಯವಸ್ಥೆಗೆ ಆಗ್ರಹ

ಸಾರ್ವಜನಿಕರು ಶಾಲಾ ಮಕ್ಕಳ ಸುರಕ್ಷತೆ ಬಗ್ಗೆ ಸಹಮತ ವ್ಯಕ್ತಪಡಿಸಿದ್ದಾರೆ. ಆದರೆ, ಬ್ಯಾರಿಕೇಡ್‌ಗಳನ್ನು ಕೇವಲ ಶಾಲಾ ಅವಧಿಯಲ್ಲಿ ಮಾತ್ರ ಅಳವಡಿಸಿ ಉಳಿದ ಸಮಯದಲ್ಲಿ ತೆಗೆಯಬೇಕೆಂದು ಒತ್ತಾಯಿಸಿದ್ದಾರೆ. ಶಾಲೆಗಳಿಗೆ ರಜೆ ಇರುವಾಗ, ರಾತ್ರಿ ಹೊತ್ತಿನಲ್ಲಿ ಈ ಬ್ಯಾರಿಕೇಡ್‌ಗಳ ಅವಶ್ಯಕತೆ ಏನಿದೆ? ಅವುಗಳನ್ನು ತೆಗೆದರೆ ಸಂಚಾರ ಸುಗಮವಾಗುತ್ತದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.

ಶಾಲಾ ಮಕ್ಕಳ ಸುರಕ್ಷತೆ ಮುಖ್ಯ. ಆದರೆ ರಾತ್ರಿ ಹೊತ್ತಿನಲ್ಲಿ ಈ ಬ್ಯಾರಿಕೇಡ್‌ಗಳನ್ನು ತೆರವು ಮಾಡುವುದರಿಂದ ಯಾರಿಗೂ ತೊಂದರೆಯಾಗುವುದಿಲ್ಲ. ಇದರ ಬಗ್ಗೆ ಸಂಬಂಧಪಟ್ಟ ಸ್ಥಳೀಯಾಡಳಿತ, ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು. -ಸುಧೀಶ್, ವಾಹನ ಸವಾರ ಸಾರ್ವಜನಿಕರ ಹಿತದೃಷ್ಟಿಯಿಂದ ಸೂಕ್ತ ಪರ್ಯಾಯ ವ್ಯವಸ್ಥೆ ಮಾಡುವುದು, ಬ್ಯಾರಿಕೇಡ್‌ಗಳಿಗೆ ಪ್ರತಿಫಲಕ ಅಳವಡಿಸುವುದು ಅವಶ್ಯಕವಾಗಿದೆ. ಈಗ ಇರುವ ಪ್ರತಿಫಲಕಗಳು ಹತ್ತಿರ ಬರುವ ತನಕ ಗೋಚರಕ್ಕೆ ಬರುತ್ತಿಲ್ಲ. ಅಲ್ಲದೆ ಮಳೆ ಬರುವಾಗ ರಾತ್ರಿ ವೇಳೆಯಲ್ಲಿ ಬ್ಯಾರಿಕೇಡ್‌ಗಳ ಇರುವುದು ಕಾಣಿಸುವುದಿಲ್ಲ. ಈ ಬಗ್ಗೆ ಸಂಬಂಧಿಸಿದವರು ಗಮನ ಹರಿಸಬೇಕು. -ಸುರೇಂದ್ರ, ಗ್ರಾಮಸ್ಥರು.