ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
ಗಂಗೊಳ್ಳಿ ಮೀನುಗಾರಿಕೆ ಬಂದರಿನ ಅಳಿವೆಯಲ್ಲಿ ಹೂಳೆತ್ತುವ ಕಾಮಗಾರಿ ವ್ಯವಸ್ಥಿತವಾಗಿ ನಡೆಯದ ಕಾರಣ, ಅಳಿವೆ ಸಮಸ್ಯೆ ಮತ್ತಷ್ಟು ಗಂಭೀರವಾಗಿದೆ. ಅಳಿವೆ ಸಮಸ್ಯೆಯಿಂದ ದೋಣಿಗಳು ಗಂಗೊಳ್ಳಿ ಬಂದರು ಪ್ರವೇಶಿಸಲು ಸಾಧ್ಯವಾಗದಿರುವುದು ಮೀನುಗಾರರ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ನವೆಂಬರ್‌ನಲ್ಲಿ 4.6 ಕೋಟಿ ರೂ. ವೆಚ್ಚದಲ್ಲಿ ಗಂಗೊಳ್ಳಿ ಅಳಿವೆ ಪ್ರದೇಶದಲ್ಲಿ ಹೂಳೆತ್ತುವ ಕಾಮಗಾರಿ ನಡೆಸಲಾಗಿದ್ದು, ಹೂಳೆತ್ತುವ ಕಾಮಗಾರಿ ನಡೆಸಿದ ಬಳಿಕ ಅಳಿವೆ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ.
ಮೀನುಗಾರರ ನಿರೀಕ್ಷೆಗೆ ತಕ್ಕಂತೆ ಡ್ರೆಜ್ಜಿಂಗ್ ಕಾಮಗಾರಿ ನಡೆದಿಲ್ಲ, ಗಂಗೊಳ್ಳಿ ಬಂದರಿಗೆ ಬರುವ ದಾರಿಯಲ್ಲಿ ಹೂಳೆತ್ತುವ ಬದಲು (ಡ್ರೆಜ್ಜಿಂಗ್) ಕೋಡಿಗೆ ಹೋಗುವ ದಾರಿಯಲ್ಲಿ ಹೂಳೆತ್ತುವ ಕಾಮಗಾರಿ ನಡೆಸಲಾಗಿದೆ. ಇದರಿಂದ ಗಂಗೊಳ್ಳಿ ಬಂದರು ಮೂಲಕ ಮೀನುಗಾರಿಕೆ ನಡೆಸುವ ಮೀನುಗಾರರಿಗೆ ಯಾವುದೇ ಉಪಯೋಗವಿಲ್ಲ ಎಂಬ ಆರೋಪ ಮೀನುಗಾರರಿಂದ ಕೇಳಿಬರುತ್ತಿದೆ.
ಗಂಗೊಳ್ಳಿ ಅಳಿವೆಯಲ್ಲಿ ಹಿಟಾಚಿ ಮೂಲಕ ಹೂಳೆತ್ತಿ ಬಾರ್ಜ್ ಮೂಲಕ ಹೂಳೆತ್ತಲಾಗಿದ್ದು, ಇದರಿಂದ ಏನೂ ಪ್ರಯೋಜನವಿಲ್ಲ. ಅಳಿವೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಹೂಳು ಇದೆ. ಅಳಿವೆಯಲ್ಲಿ ತೆಗೆದ ಹೂಳನ್ನು ಗಂಗೊಳ್ಳಿ ಬಂದರಿಗೆ ಬರುವ ದಾರಿಯುದ್ದಕ್ಕೂ ಹಾಕುತ್ತಾ ಹೋಗಿರುವುದರಿಂದ ಅಲ್ಲಲ್ಲಿ ಮರಳು ದಿಬ್ಬ ಸೃಷ್ಟಿಯಾಗಿದೆ. ಇದರಿಂದ ಪರ್ಸಿನ್ ಮತ್ತು ಫಿಶಿಂಗ್ ಬೋಟುಗಳು ಹಾಗೂ ದೋಣಿಗಳು ಗಂಗೊಳ್ಳಿ ಬಂದರು ಪ್ರವೇಶಿಸಲು ಕಷ್ಟವಾಗುತ್ತಿದ್ದು, ಅಳಿವೆಯಲ್ಲಿ ಅನಾಹುತಕ್ಕೆ ಕಾರಣವಾಗುವ ಸಾಧ್ಯತೆಗಳಿವೆ.
ಡ್ರೆಜ್ಜಿಂಗ್ ಕಾಮಗಾರಿ ನಡೆಸಲು ಸುಮಾರು ಒಂದು ವರ್ಷ ಕಾಲಾವಕಾಶ ನೀಡಲಾಗಿತ್ತು. ಆದರೆ ಡ್ರೆಜ್ಜಿಂಗ್ ಆರಂಭಿಸಿದ ಒಂದೇ ತಿಂಗಳಲ್ಲಿ ಸಂಬಂಧಪಟ್ಟ ಗುತ್ತಿಗೆದಾರರು ಡ್ರೆಜ್ಜಿಂಗ್ ಕಾಮಗಾರಿ ಮುಗಿದಿದೆ ಎಂದು ಹೇಳಿ ಬಂದರಿನಿಂದ ಕಾಲ್ಕಿತ್ತಿದ್ದಾರೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕಾಮಗಾರಿ ಪರಿಶೀಲನೆ ಮಾಡುವ ಗೋಜಿಗೆ ಹೋಗದಿರುವುದು ಅನುಮಾನಗಳಿಗೆ ಕಾರಣವಾಗಿದೆ.
ಅಳಿವೆಯ ಹೂಳಿನ ಸಮಸ್ಯೆ ಬಗೆಹರಿಸಲು ಹೋಗಿ ಮತ್ತಷ್ಟು ಸಮಸ್ಯೆ ಸೃಷ್ಟಿ ಮಾಡಿರುವುದು ಮೀನುಗಾರರ ಆತಂಕಕ್ಕೆ ಕಾರಣವಾಗಿದ್ದು, ಮೀನುಗಾರಿಕೆ ಋತುವಿನ ಆರಂಭದಲ್ಲೇ ದೋಣಿಗಳು ಗಂಗೊಳ್ಳಿ ಪ್ರವೇಶಿಸಲು ಸಾಧ್ಯವಾಗದೆ ಬೇರೆ ಬೇರೆ ಹೋಗುವ ಪರಿಸ್ಥಿತಿ ಉದ್ಭವಿಸಿದೆ.
ಗಂಗೊಳ್ಳಿ ಬಂದರಿನಲ್ಲಿ ಸುಮಾರು 100ಕ್ಕೂ ಮಿಕ್ಕಿ ಫಿಶಿಂಗ್ ಬೋಟ್ ಸೇರಿದಂತೆ 400ಕ್ಕೂ ಮಿಕ್ಕಿ ಬೋಟುಗಳು ಹಾಗೂ 25ಕ್ಕೂ ಮಿಕ್ಕಿ ಆಳ ಸಮುದ್ರ ಬೋಟುಗಳು ಕಾರ್ಯಚರಿಸುತ್ತಿದೆ. ಮೀನುಗಾರರಿಗೆ ಕಂಟಕವಾಗಿ ಪರಿಣಮಿಸುತ್ತಿರುವ ಗಂಗೊಳ್ಳಿ - ಕೋಡಿ ಅಳಿವೆ ಪ್ರದೇಶದಲ್ಲಿ ದಶಕಗಳ ಹಿಂದಿನಿಂದಿಲೂ ಅಳಿವೆ ಹೂಳೆತ್ತಬೇಕೆಂಬ ಬೇಡಿಕೆಗೆ ಸ್ಪಂದನೆ ದೊರೆತಿರಲಿಲ್ಲ. ಈ ಬಾರಿ ಗಂಗೊಳ್ಳಿ- ಕೋಡಿ ಅಳಿವೆ ಪ್ರದೇಶದಲ್ಲಿ ಹೂಳೆತ್ತುವ ಕಾಮಗಾರಿ ನಡೆದಿರುವುದು ಮೀನುಗಾರರಲ್ಲಿ ಸಂತಸಕ್ಕೆ ಕಾರಣವಾಗಿತ್ತಾದರೂ ಇದೀಗ ಅಳಿವೆ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ ಎಂದು ಮೀನುಗಾರರು ಅಳಲು ತೋಡಿಕೊಂಡಿದ್ದಾರೆ.
ಗಂಗೊಳ್ಳಿ - ಕೋಡಿ ಅಳಿವೆ ಪ್ರದೇಶದಲ್ಲಿ ದಶಕಗಳ ಹಿಂದಿನಿಂದಿಲೂ ಅಳಿವೆ ಹೂಳೆತ್ತಬೇಕೆಂಬ ಬೇಡಿಕೆಗೆ ಸ್ಪಂದನೆ ದೊರೆತಿರಲಿಲ್ಲ. ಈ ಬಾರಿ ಗಂಗೊಳ್ಳಿ- ಕೋಡಿ ಅಳಿವೆ ಪ್ರದೇಶದಲ್ಲಿ ಹೂಳೆತ್ತುವ ಕಾಮಗಾರಿ ನಡೆದು ಅಳಿವೆ ಹೂಳಿನ ಸಮಸ್ಯೆ ಬಗೆಹರಿಯಲಿದೆ ಎಂಬ ವಿಶ್ವಾಸ ನಮ್ಮಲ್ಲಿತ್ತು. ಆದರೆ ಹೂಳೆತ್ತುವ ಕಾಮಗಾರಿ ವ್ಯವಸ್ಥಿತವಾಗಿ ನಡೆಯದ ಕಾರಣ ಮೀನುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗಂಗೊಳ್ಳಿ ಬಂದರು ಪ್ರವೇಶಿಸುವ ದಾರಿಯಲ್ಲಿ ಹೂಳೆತ್ತುವ ಕಾಮಗಾರಿ ನಡೆಸದಿರುವುದರಿಂದ ಅಳಿವೆಯಲ್ಲಿ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ.-ಸದಾಶಿವ ಖಾರ್ವಿ ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಂಘ ಅಧ್ಯಕ್ಷ