ಬೆಳ್ತಂಗಡಿ: ಸಾಹಿತ್ಯ ಸಂಪತ್ತಿನೊಂದಿಗೆ ಭಾರತೀಯ ವಿಜ್ಞಾನದ ಮೂಲ ಜ್ಞಾನವನ್ನು ಸಂಸ್ಕೃತಜ್ಞರು ನೀಡಿದ್ದಾರೆ. ಪ್ರಾಚೀನ ಸಾಹಿತ್ಯ ಹಾಗೂ ಸಂಸ್ಕೃತಿ ಉಳಿವಿಗೆ ಸಂಸ್ಕೃತ ಅಧ್ಯಯನ ಅಗತ್ಯ. ವಿಪುಲವಾದ ಜ್ಞಾನ ಸಂಪತ್ತು ಸಂಸ್ಕೃತ ಭಾಷೆಯಲ್ಲಿದೆ ಎಂದು ಉಜಿರೆ ಶಳ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸನಿವಾಸ ಪದವಿ ಪೂರ್ವ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಮಹೇಶ್ ಎಸ್.ಎಸ್. ಹೇಳಿದರು.
ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಸಂಸ್ಕೃತ ಸಂಘ ಹಾಗೂ ಸಂಸ್ಕೃತ ಅಂತರಾಧ್ಯಯನ ವೃತ್ತಮ್ ಪದಾಧಿಕಾರಿಗಳ ಪದಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಉಪ ಪ್ರಾಚಾರ್ಯ ಡಾ.ರಾಜೇಶ್ ಬಿ. ಅಧ್ಯಕ್ಷತೆ ವಹಿಸಿ, ಸುಬೋಧಿನೀ ಸಂಸ್ಕೃತ ಡಿಜಿಟಲ್ ಭಿತ್ತಿಪತ್ರಿಕೆ ಅನಾವರಣಗೊಳಿಸಿದರು. ಎಸ್ಸೆಸ್ಸೆಲ್ಸಿ ಸಂಸ್ಕೃತ ಪರೀಕ್ಷೆಯಲ್ಲಿ ಪೂರ್ಣಾಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕಳೆದ ವರ್ಷದ ದ್ವಿತೀಯ ಪಿಯುಸಿ ಸಂಸ್ಕೃತ ವಿದ್ಯಾರ್ಥಿಗಳು ಸಂಗ್ರಹಿಸಿದ ಸಂಸ್ಕೃತ ಪುಸ್ತಕಗಳನ್ನು ಸಂಸ್ಕೃತ ಸಂಘದ ಅಧ್ಯಕ್ಷರಾಗಿದ್ದ ಗುರುದತ್ತ ಮರಾಠೆ ಗ್ರಂಥಾಲಯಕ್ಕೆ ಹಸ್ತಾಂತರಿಸಿದರು. ಸಂಸ್ಕೃತ ಭಾಷಾ ವಿಭಾಗ ಮುಖ್ಯಸ್ಥ ಡಾ.ಪ್ರಸನ್ನಕುಮಾರ ಐತಾಳ್ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಅನೀಕಾ ತಂಡದವರು ಸಂಸ್ಕೃತ ಗೀತಗಾಯನ ಪ್ರಸ್ತುತಪಡಿಸಿದರು. ಸಂಸ್ಕೃತ ಸಂಘ ಅಧ್ಯಕ್ಷೆ ಹಂಸಿನಿ ಭಿಡೆ ಸ್ವಾಗತಿಸಿದರು. ಉಪಾಧ್ಯಕ್ಷ ಯಶಸ್ವಿ ಸಾಧಕರ ಪಟ್ಟಿ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಪ್ರಸನ್ನಾ ವಂದಿಸಿದರು. ನಿಜ ಕುಲಾಲ್ ನಿರೂಪಿಸಿದರು.