ಜಿಲ್ಲೆ

ಶಿಕ್ಷಣದ ಸಾಮಾಜಿಕತೆಯಿಂದ ಕ್ಷೇಮಾಭ್ಯುದಯ ಮಾದರಿಯ ಕೊಡುಗೆ : ಡಾ.ಕ್ಯಾರೊಲ್ ಡಿ.ರಿಫ್ ಹೇಳಿಕೆ

ಸೌಮ್ಯ ಆರ್

ಬೆಳ್ತಂಗಡಿ: ವ್ಯಕ್ತಿಗತ ಬೆಳವಣಿಗೆಯೊಂದಿಗೆ ನಂಟು ಹೊಂದಿರುವ ಸಾಮಾಜಿಕ ಅಭ್ಯುದಯದ ಆಯಾಮಗಳನ್ನು ಶೋಧಿಸುವ ಅಂತಃಸತ್ವದೊಂದಿಗೆ ಭಾರತೀಯ ಶೈಕ್ಷಣಿಕ ವ್ಯವಸ್ಥೆ ಗುರುತಿಸಿಕೊಂಡಿದೆ. ಈ ಬಗೆಯ ವ್ಯವಸ್ಥಿತ ಬದ್ಧತೆಯು ಜಗತ್ತಿಗೆ ಕ್ಷೇಮಾಭ್ಯುದಯದ ಮೌಲಿಕ ಮಾದರಿಗಳ ಕೊಡುಗೆ ನೀಡುತ್ತಿದೆ ಎಂದು ಅಮೆರಿಕಾದ ವಿಸ್ಕಾನ್ಸಿನ್ ಮ್ಯಾಡಿಸನ್ ವಿವಿಯ ಇನ್‌ಸ್ಟಿಟ್ಯೂಟ್ ಆಫ್ ಏಜಿಂಗ್‌ನ ನಿರ್ದೇಶಕಿ, ಮನಃಶಾಸ್ತ್ರಜ್ಞೆ ಡಾ.ಕ್ಯಾರೊಲ್ ಡಿ.ರಿಫ್ ಹೇಳಿದರು.

ಉಜಿರೆ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಮನೋವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಆಯೋಜಿಸಿದ ಎರಡು ದಿನಗಳ ಅಂತಾರಾಷ್ಟ್ರೀಯ ವಿಚಾರ ಸಂಕಿರಣಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಬೆಂಗಳೂರಿನ ಕ್ಷೇಮವನದ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಶ್ರದ್ಧಾ ಅಮಿತ್ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಅಭ್ಯುದಯದ ವಲಯದಲ್ಲಿ ಮನೋವಿಜ್ಞಾನ ಮೌಲಿಕ ಪಾತ್ರ ನಿರ್ವಹಿಸುತ್ತಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಯೋಜನೆಯ ಭಾಗವಾಗಿ ‘ಗೆಳತಿ’ ವಿಭಾಗದ ಏಳು ಕೇಂದ್ರಗಳು ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿವೆ ಎಂದರು.

ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ಮಾತನಾಡಿದರು. ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗಡೆ ಬಿ.ಎ. ಅಧ್ಯಕ್ಷತೆ ವಹಿಸಿದ್ದರು. ಡಾ.ಸುಮಿತ್ ದತ್ತಾ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ವಿಶ್ವನಾಥ ಪಿ ಉಪಸ್ಥಿತರಿದ್ದರು.

ವಿಭಾಗದ ಮುಖ್ಯಸ್ಥೆ ಡಾ.ವಂದನಾ ಜೈನ್ ಸ್ವಾಗತಿಸಿದರು. ಸಂಕಿರಣದ ಸಂಘಟನಾ ಕಾರ್ಯದರ್ಶಿ ಅಶ್ವಿನಿ ಶೆಟ್ಟಿ ವಂದಿಸಿದರು. ವಿದ್ಯಾರ್ಥಿಗಳಾದ ಅಲಿಷಾ ಮತ್ತು ಜಾಹ್ನವಿ ಕಾರ್ಯಕ್ರಮ ನಿರೂಪಿಸಿದರು.

ವಿಶ್ರಾಂತ ಪ್ರಾಧ್ಯಾಪಕಿ, ಎಸ್.ಡಿ.ಎಂ ಮನೋವಿಜ್ಞಾನ ವಿಭಾಗದಲ್ಲಿ 18 ವರ್ಷಗಳ ಕಾಲ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದ ಡಾ.ಎಂ.ವೈ.ಮಂಜುಳಾ ವಿಭಾಗದ ಸಾಧನೆಯ ಪ್ರಮುಖ ಮೈಲಿಗಲ್ಲುಗಳನ್ನು ಸ್ಮರಿಸಿದರು. ‘ಸಿಲ್ವರ್ ಥ್ರೆಡ್ಸ್ ಆಫ್ ಥಾಟ್ಸ್’ ಎಂಬ ಸಾಕ್ಷೃಚಿತ್ರವನ್ನು ಶ್ರದ್ಧಾ ಅಮಿತ್ ಬಿಡುಗಡೆಗೊಳಿಸಿದರು.