ಜಿಲ್ಲೆ

ನೆನಪಿನ ಜತೆ ನಮ್ಮ ಬದುಕು : ಜಿ. ತುಕಾರಾಮ್ ನಿಡ್ಲೆ ಬಣ್ಣನೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಮಾಸಿಕ ಸಂವಾದ ಸರಣಿ (ಕಾಲೇಜಿನ ಹಿರಿಯ ವಿದ್ಯಾರ್ಥಿಯೊಂದಿಗೆ ಸಂವಾದ) ‘ಎಸ್.ಡಿ.ಎಂ. ನೆನಪಿನಂಗಳ’ದ ಹದಿನೈದನೇ ಕಂತಿನ ಕಾರ್ಯಕ್ರಮ ಶನಿವಾರ ನಡೆಯಿತು. ಕಾಲೇಜಿನ ಹದಿನೈದು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತಲಾ ಐದು ಸಾವಿರ ರೂ. ಸಹಾಯಧನ ವಿತರಿಸಲಾಯಿತು.

ಕೇಂದ್ರ ಸರ್ಕಾರದ ಸಮಾಚಾರ ಮತ್ತು ಪ್ರಸಾರ ಸಚಿವಾಲಯದ ಸೆಂಟ್ರಲ್ ಬ್ಯುರೋ ಆಫ್ ಕಮ್ಯುನಿಕೇಶನ್‌ನ ಮಂಗಳೂರು ಕ್ಷೇತ್ರ ಪ್ರಚಾರ ಅಧಿಕಾರಿ ಜಿ. ತುಕಾರಾಮ್ ನಿಡ್ಲೆ (ಜಿತು ನಿಡ್ಲೆ) ಮಾತನಾಡಿ, ನೆನಪು ಮಾಡಿಕೊಳ್ಳುವುದಕ್ಕಿಂತ, ನೆನಪಿನ ಜತೆ ಬದುಕುವವರು ನಾವು. ಎಸ್.ಡಿ.ಎಂ. ಕಾಲೇಜಿನ ನೆನಪು ನನಗೆ ಮತ್ತೆ ಮತ್ತೆ ಆಗುತ್ತಿರುತ್ತದೆ. ಆ ಕಾಲದಲ್ಲಿ ಇಲ್ಲಿನಷ್ಟು ಸುಸಜ್ಜಿತ ಗ್ರಂಥಾಲಯ ಬೇರೆ ಎಲ್ಲೂ ಇರಲಿಲ್ಲ. ಸಾಹಿತಿ ಕೆ.ಟಿ. ಗಟ್ಟಿ ಅವರ ಪ್ರೇರಣೆಯಿಂದ ನಾನು ಇಂಗ್ಲಿಷ್ ಪುಸ್ತಕ ಓದಲು ಆರಂಭಿಸಿದೆ. ನಾವು ಲಹರಿ ಎಂಬ ಕೈ ಬರಹದ ಪತ್ರಿಕೆ ಪ್ರಾರಂಭಿಸಿದ್ದೆವು. ಕಾಲೇಜು ನನಗೆ ರಂಗಭೂಮಿ ಕ್ಷೇತ್ರದಲ್ಲಿ, ಸಾಹಿತ್ಯ ಕ್ಷೇತ್ರದಲ್ಲಿ ಹಾಗೂ ಸಾಮಾಜಿಕವಾಗಿ ಬೆಳೆಯಲು ಹೇರಳ ಅವಕಾಶ ಕೊಟ್ಟಿದೆ ಎಂದರು.

ಯು.ಎಚ್. ಖಾಲಿದ್ ಮಾತನಾಡಿ, ಎಸ್.ಡಿ.ಎಂ. ಕಾಲೇಜು ಬದುಕಿಗೆ ದಾರಿ ಮಾಡಿಕೊಟ್ಟಿದೆ. ನಮ್ಮ ಶಕ್ತಿ, ಆಸಕ್ತಿ, ಕಾಳಜಿ, ಪ್ರಯತ್ನವನ್ನು ನಾವೇ ಮೆಚ್ಚಿಕೊಳ್ಳಬೇಕು ಎಂದರು.

ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪೀತಾಂಬರ ಹೆರಾಜೆ ಮಾತನಾಡಿ, ಏನೇ ಆಗುವ ಮೊದಲು ನೀವು ಉತ್ತಮ ಮನುಷ್ಯರಾಗಿ, ನಿಮ್ಮ ಜೀವನದಲ್ಲಿ ಶಿಸ್ತು, ಗುರಿ ಇರಲಿ ಎಂದರು.ಡಾ. ಬಿ.ಪಿ. ಸಂಪತ್ ಕುಮಾರ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಿದ್ಯಾರ್ಥಿಗಳಾದ ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಆಡಳಿತ ನಿರ್ದೇಶಕ, ಉಜಿರೆ ಶ್ರೀ ಧ.ಮಂ. ಕಾಲೇಜಿನ ವಿಶ್ರಾಂತ ಕುಲಸಚಿವ ಡಾ. ಬಿ.ಪಿ. ಸಂಪತ್ ಕುಮಾರ ಹಾಗೂ ಮಂಗಳೂರಿನ ನ್ಯಾಶನಲ್ ಸಂಘದ ಉಪಾಧ್ಯಕ್ಷ ಗುರುನಾಥ ಪ್ರಭು ಉಪಸ್ಥಿತರಿದ್ದರು.

ಸಂಘದ ಕಾರ್ಯಕ್ರಮ ಸಂಯೋಜಕ ಡಾ. ಎಂ. ಪಿ. ಶ್ರೀನಾಥ್ ಸ್ವಾಗತಿಸಿದರು. ಪ್ರಾಧ್ಯಾಪಕರಾದ ಅಭಿಲಾಷ್ ವಂದಿಸಿ, ಡಾ. ದಿವಾಕರ ಕೊಕ್ಕಡ ಕಾರ್ಯಕ್ರಮ ನಿರೂಪಿಸಿದರು.

ಅನ್ನದಾನಕ್ಕಿಂತ ಶ್ರೇಷ್ಠ ವಿದ್ಯಾದಾನ. ಓದಬೇಕು, ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಹಂಬಲ ಮೂಡಿದ್ದೇ ಈ ಕಾಲೇಜಿಗೆ ಬಂದ ಬಳಿಕ. ಈ ಕಾಲೇಜು, ಸಿದ್ಧವನ ಗುರುಕುಲ ವಿದ್ಯೆಯನ್ನು ನೀಡಿ ನಮ್ಮ ಜೀವನ ರೂಪಿಸಿದೆ. ಸಿಗುವ ಅವಕಾಶವನ್ನು ಬಳಸಿಕೊಂಡರೆ ಜೀವನದಲ್ಲಿ ಯಶಸ್ಸು ದಕ್ಕುತ್ತದೆ. - ಡಾ. ಬಿ.ಪಿ. ಸಂಪತ್ ಕುಮಾರ, ಹಳೇ ವಿದ್ಯಾರ್ಥಿ