ಜಿಲ್ಲೆ

ಅರ್ಧಬೆಲೆಗೆ ಸ್ಕೂಟರ್, ಲ್ಯಾಪ್ ಟಾಪ್

Avinash R

ಬದಿಯಡ್ಕ: ಸಿಎಎಸ್‌ಆರ್ ಫಂಡ್ ಉಪಯೋಗಿಸಿ ಅರ್ಧ ಬೆಲೆಗೆ ಸ್ಕೂಟರ್, ಲ್ಯಾಪ್‌ಟಾಪ್, ಹೊಲಿಗೆ ಯಂತ್ರ ನೀಡುವುದಾಗಿ ಭರವಸೆ ನೀಡಿ ಕುಂಬ್ಡಾಜೆ ಮೈತ್ರಿ ಗ್ರಂಥಾಲಯ ಜನರಿಂದ 30ಲಕ್ಷಕ್ಕೂ ಅಧಿಕ ಹಣ ಪಡೆದು ವಂಚಿಸಿದ್ದು, ಸಮಗ್ರ ತನಿಖೆಯಾಗಬೇಕು ಎಂದು ಕುಂಬ್ಡಾಜೆ ಬಿಜೆಪಿ ಪಂಚಾಯಿತಿ ಸಮಿತಿ ಆಗ್ರಹಿಸಿದೆ. ಸಂಬಂಧಪಟ್ಟವರ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿ ವಂಚನೆಗೊಳಗಾದವರಿಗೆ ನ್ಯಾಯ ಒದಗಿಸಬೇಕೆಂದು ಬಿಜೆಪಿ ಕುಂಬ್ಡಾಜೆ ಪಂಚಾಯಿತಿ ಅಧ್ಯಕ್ಷ ಹರೀಶ್ ಗೋಸಾಡ ತಿಳಿಸಿದ್ದಾರೆ.

*250ಕ್ಕೂ ಅಧಿಕ ಮಂದಿಗೆ ಮೋಸ: ಕೇರಳದ ವಿವಿಧ ಸ್ಥಳಗಳಲ್ಲಿ ಸಿಎಸ್‌ಆರ್ ಫಂಡ್ ಮೂಲಕ ಅರ್ಧ ಬೆಲೆಗೆ ಸ್ಕೂಟರ್, ಲ್ಯಾಪ್‌ಟಾಪ್ ನೀಡುವುದಾಗಿ ಹೇಳಿ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದ ಅನಂತುಕೃಷ್ಣನ್ ವಿರುದ್ಧ ಕಾಸರಗೋಡು ಜಿಲ್ಲೆಯಲ್ಲಿಯೂ ದೂರು ದಾಖಲಾಗಿದೆ.

ಕುಂಬ್ಡಾಜೆ ಪಂಚಾಯಿತಿಯ ಮಾರ್ಪನಡ್ಕದಲ್ಲಿರುವ ಮೈತ್ರಿ ಗ್ರಂಥಾಲಯದ ಮೂಲಕ ಸ್ಕೂಟರ್, ಲ್ಯಾಪ್‌ಟಾಪ್, ಟೈಲರಿಂಗ್ ಮೆಷಿನ್ ನೀಡುವುದಕ್ಕಾಗಿ 250ಕ್ಕಿಂತಲೂ ಅಧಿಕ ಮಂದಿಯಿಂದ ಹಣ ಪಡೆದು ವಂಚಿಸಿದ್ದಾರೆಂದು ದೂರು ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಾಯಿಗ್ರಾಮ್ ಗ್ಲೋಬಲ್ ಟ್ರಸ್ಟ್ ಅಧ್ಯಕ್ಷ ಕೆ.ಎನ್.ಅನಂತಕುಮಾರ್ ಮೂಲಕ ಅನಂತಕೃಷ್ಣನ್ ಜತೆಗೆ ಹಣ ಒಪ್ಪಂದ ಮಾಡಿಕೊಂಡೆವು. ಹಿಂದಿನ ಪಾವತಿಯಂತೆ 40 ಸ್ಕೂಟರ್‌ಗಳು, 75 ಲ್ಯಾಪ್‌ಟಾಪ್‌ಗಳು ಮತ್ತು 250 ಹೊಲಿಗೆ ಯಂತ್ರಗಳನ್ನು ಪಡೆದಿರುವುದಾಗಿ ಗ್ರಂಥಾಲಯದ ಅಧಿಕೃತರು ತಿಳಿಸಿದ್ದಾರೆ. 36 ಸ್ಕೂಟರ್‌ಗಳು ಮತ್ತು 36 ಲ್ಯಾಪ್‌ಟಾಪ್‌ಗಳಿಗೆ ಹಣ ಪಾವತಿಸಲಾಗಿದೆ. ಆದರೆ ಇವುಗಳನ್ನು ಒದಗಿಸದೆ ವಂಚಿಸಲಾಗಿದೆ ಎಂದು ದೂರು ನೀಡಲಾಗಿದೆ.