ಪುತ್ತೂರು ಗ್ರಾಮಾಂತರ: ತ್ಯಾಜ್ಯವನ್ನು ಎಲ್ಲೆಂದರಲ್ಲೆ ಎಸೆದು ಪರಿಸರವನ್ನು ಹಾಳು ಮಾಡಿ ಬಳಿಕ ತ್ಯಾಜ್ಯವನ್ನು ಹೆಕ್ಕುವ ಕೆಲಸ ಮಾಡುವುದಕ್ಕಿಂತ ತ್ಯಾಜ್ಯವನ್ನು ಸಿಕ್ಕಸಿಕ್ಕಲ್ಲಿ ಎಸೆಯದೆ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು, ಆ ಮೂಲಕ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದು ಬಹಳ ಅಗತ್ಯ. ಪ್ರತಿಯೊಬ್ಬ ನಾಗರಿಕ ತನ್ನ ಸುತ್ತಮುತ್ತಲಿನ ಸ್ವಚ್ಛತೆಯ ವಿಚಾರದಲ್ಲಿ ಕಾಳಜಿ ವಹಿಸಿದರೆ ಆರೋಗ್ಯಪೂರ್ಣ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಪುತ್ತೂರು ಘಟಕದ ಅಧ್ಯಕ್ಷೆ ಮಲ್ಲಿಕಾ ಜೆ.ರೈ ಗುಂಡ್ಯಡ್ಕ ಹೇಳಿದರು.
ಅರಿಯಡ್ಕ ಗ್ರಾಮದ ಕುತ್ಯಾಡಿಯಲ್ಲಿ ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ (ಎಸ್‌ಸಿಐ) ಪುತ್ತೂರು ಘಟಕದ ವತಿಯಿಂದ ನಡೆದ ಸ್ವಚ್ಛ ಗಂಗಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಪುತ್ತೂರು ಘಟಕದ ಸದಸ್ಯೆ ಅನ್ನಪೂರ್ಣ ಆರ್.ರೈ ಮಾತನಾಡಿದರು. ರಾಜೀವ ರೈ ಕುತ್ಯಾಡಿ ಉಪಸ್ಥಿತರಿದ್ದರು. ಕುತ್ಯಾಡಿ ವ್ಯಾಪ್ತಿಯಲ್ಲಿ ಹಾದು ಹೋಗುವ ಹೊಳೆಯಲ್ಲಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತೆಗೆದು ಶುಚಿಗೊಳಿಸಲಾಯಿತು. ಕುತ್ಯಾಡಿ ವ್ಯಾಪ್ತಿಯ ನಿವಾಸಿಗಳಾದ ಚಂದ್ರ, ಹರೀಶ್, ರೋಹಿಣಿ, ಸಾವಿತ್ರಿ, ವೆಂಕಮ್ಮ, ಲಕ್ಷ್ಮೀ ಮತ್ತಿತರರು ತ್ಯಾಜ್ಯ ವಿಲೇವಾರಿಗೆ ಸಹಕರಿಸಿದರು.