ವಿಜಯವಾಣಿ ಸುದ್ದಿಜಾಲ ಬೈಂದೂರು
ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಲಿ ಎನ್ನುವ ಉದ್ದೇಶದಿಂದ ಪ್ರೀತಿಯಿಂದ ಕೊಡಲ್ಪಡುವ ಶೈಕ್ಷಣಿಕ ಪರಿಕರಗಳನ್ನು ಸರಿಯಾಗಿ ಬಳಸಿಕೊಳ್ಳುವ ಮೂಲಕ ನೀವು ಉತ್ತಮ ಭವಿಷ್ಯ ಪಡೆದು, ಮುಂದೆ ನಿಮ್ಮ ಹಾಗೆ ಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಅದರ ಋಣ ತೀರಿಸಬೇಕು ಎಂದು ಹಕ್ಲಾಡಿ ಸರ್ಕಾರಿ ಪ್ರೌಢಶಾಲಾ ಶಿಕ್ಷಕ ಡಾ.ಕಿಶೋರ್ ಕುಮಾರ್ ಶೆಟ್ಟಿ ಹೇಳಿದರು.
ನಾವುಂದ ಹಿಂದು ಅಭ್ಯುದಯ ಸಂಘದ ವತಿಯಿಂದ ನಾವುಂದ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಪ್ರೌಢಶಾಲೆಗಳ 8ನೇ ತರಗತಿಯಲ್ಲಿ ಓದುತ್ತಿರುವ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸ್ಕೂಲ್‌ಬ್ಯಾಗ್ ವಿತರಿಸಿ ಮಾತನಾಡಿದರು.
ಹಿಂದು ಅಭ್ಯುದಯ ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ ಪ್ರಾಸ್ತಾವಿಸಿದರು. ಹಿರಿಯ ಸದಸ್ಯ ಗೋವಿಂದ ಡಿ.ಮಸ್ಕಿ ಶುಭ ಹಾರೈಸಿದರು. ಸಂಘದ ಉಪಾಧ್ಯಕ್ಷ ಪ್ರವೀಣ್ ಪೂಜಾರಿ, ಸಂಘದ ಕಾರ್ಯಕಾರಿ ಮಂಡಳಿ ಸದಸ್ಯರಾದ ಸಂಜೀವ ಗಾಣಿಗ, ನರಸಿಂಹ ಆಚಾರ್, ರವಿಕುಮಾರ್ ಅರೆಹೊಳೆ, ಮನೋಹರ ಎನ್.ಕೆ., ಸತೀಶ ಎಸ್.ಪೂಜಾರಿ, ಸತ್ಯನಾರಾಯಣ ಗಾಣಿಗ, ಅಭಿಷೇಕ್ ಎಂ., ಸುದರ್ಶನ್ ಗಾಣಿಗ, ಗುರುರಾಜ ಶೇಟ್, ಮಂಜುನಾಥ ಆರ್.ಗಾಣಿಗ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಎ.ಶಿವರಾಮ ಮಧ್ಯಸ್ಥ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ವಿಘ್ನೇಶ್ವರ ಕೆ. ವಂದಿಸಿದರು. ನಾವುಂದ ಗ್ರಾಮದ 29 ವಿದ್ಯಾರ್ಥಿಗಳಿಗೆ ರೂ.30 ಸಾವಿರ ಮೌಲ್ಯದ ಸ್ಕೂಲ್ ಬ್ಯಾಗ್ ವಿತರಿಸಲಾಯಿತು.
ಎಲ್ಲ ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಕ್ರೀಡೆ, ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಮಾಜದಲ್ಲಿ ಎತ್ತರಕ್ಕೇರಬೇಕು. ಎಲ್ಲರೂ ನಿಮ್ಮನ್ನು ಅನುಸರಿಸುವಂತೆ, ಗೌರವಿಸುವಂತೆ ನಿಮ್ಮ ನಡೆ-ನುಡಿಗಳಿರಬೇಕು. ಆಗ ನಿಮ್ಮ ಬದುಕಿಗೆ ಸಾರ್ಥಕತೆ ದೊರೆಯುತ್ತದೆ. ನಿಮ್ಮ ವೈಯುಕ್ತಿಕ ವಿಷಯಗಳೊಂದಿಗೆ ದೇಶಾಭಿಮಾನ ಬೆಳೆಸಿ, ಭವ್ಯ ಭಾರತ ನಿರ್ಮಾಣಕ್ಕೆ ನಿಮ್ಮದೇ ಆದ ಕೊಡುಗೆ ನೀಡಬೇಕು.-ಡಾ.ಕಿಶೋರ್ ಕುಮಾರ್ ಶೆಟ್ಟಿ, ಶಿಕ್ಷಕ, ಹಕ್ಲಾಡಿ ಸರ್ಕಾರಿ ಪ್ರೌಢಶಾಲೆ